ನವದೆಹಲಿ: ಕೃತಕ ಬುದ್ಧಿಮತ್ತೆ (Artificial Intelligence–AI) ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ದೈನಂದಿನ ಜೀವನದ ಪ್ರಮುಖ ಭಾಗವಾಗಿ ಬೆಳೆಯುತ್ತಿದೆ. ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಮುಂದುವರಿಯಲು AI ಕುರಿತು ಮೂಲಭೂತ ಜ್ಞಾನ ಅಗತ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಜನಸಾಮಾನ್ಯರಿಗಾಗಿ ಉಚಿತ AI ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ತನ್ನ IndiaAI Mission ಅಡಿಯಲ್ಲಿ ‘ಯೂತ್ ಎಐ ಫಾರ್ ಆಲ್” ಎಂಬ ಅಭಿಯಾನವನ್ನು ಜಾರಿಗೊಳಿಸಿದೆ. ದೇಶದ ಸುಮಾರು ಒಂದು ಕೋಟಿ ನಾಗರಿಕರಿಗೆ AI ಕುರಿತು ಮೂಲಭೂತ ಅರಿವು ಮತ್ತು ಕೌಶಲ್ಯಗಳನ್ನು ಉಚಿತವಾಗಿ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಕೋರ್ಸ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಸುಮಾರು ನಾಲ್ಕು ಗಂಟೆಗಳ ಸ್ವಯಂ-ಕಲಿಕೆ (ಸೆಲ್ಫ್-ಪೇಸ್ಡ್) ಮಾದರಿಯಲ್ಲಿ ರೂಪಿಸಲಾಗಿದೆ. AI ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅದರ ಬಳಕೆ, ಸುರಕ್ಷಿತ AI ಬಳಕೆ, ಭಾರತದಲ್ಲಿನ AI ಅನ್ವಯಿಕೆಗಳು ಹಾಗೂ ಭವಿಷ್ಯದ ವೃತ್ತಿ ಅವಕಾಶಗಳ ಕುರಿತು ಆರು ಮಾಡ್ಯೂಲ್‌ಗಳ ಮೂಲಕ ಸರಳವಾಗಿ ವಿವರಿಸಲಾಗಿದೆ. ಕೋರ್ಸ್ ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
ಈ ಉಚಿತ ತರಬೇತಿಗೆ ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಯಾವುದೇ ನಾಗರಿಕರು ನೋಂದಾಯಿಸಿಕೊಂಡು ತರಬೇತಿ ಪಡೆಯಬಹುದು. ಕಂಪ್ಯೂಟರ್ ಅಥವಾ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕ ಇದ್ದರೆ ಮನೆಯಲ್ಲೇ ಈ ಕೋರ್ಸ್ ಪೂರ್ಣಗೊಳಿಸಬಹುದು.
ಕೋರ್ಸ್‌ನ ಎಲ್ಲಾ ಆರು ಮಾಡ್ಯೂಲ್‌ಗಳನ್ನು ಪೂರ್ಣಗೊಳಿಸಿ ಅಂತಿಮ ಮೌಲ್ಯಮಾಪನದಲ್ಲಿ ಉತ್ತೀರ್ಣರಾದವರಿಗೆ ಭಾರತ ಸರ್ಕಾರದ ಅಧಿಕೃತ ಪ್ರಮಾಣಪತ್ರ (ಸರ್ಟಿಫಿಕೇಟ್) ನೀಡಲಾಗುತ್ತದೆ. ಆಸಕ್ತರು FutureSkills Prime ಅಥವಾ MY Bharat ಅಧಿಕೃತ ಪೋರ್ಟಲ್‌ಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಂಡು ತರಬೇತಿ ಆರಂಭಿಸಬಹುದು. ಕೋರ್ಸ್ ಪೂರ್ಣಗೊಂಡ ಬಳಿಕ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
AI ಯುಗದಲ್ಲಿ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಬಯಸುವವರಿಗೆ ಸರ್ಕಾರದ ಈ ಉಚಿತ ತರಬೇತಿ ಉತ್ತಮ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸರ್ಕಾರ ಕರೆ ನೀಡಿದೆ.





m
