ನೆಬುಲಸ್ ತಂಡ ಪ್ರಥಮ, ತರಾಬ್ಲಸ್ ತಂಡ ದ್ವಿತೀಯ — ವಿಜೇತ ತಂಡಗಳಿಗೆ ಟ್ರೋಫಿ ವಿತರಣೆ
ಸುಳ್ಯ: ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧೀನದಲ್ಲಿರುವ ಗ್ರೀನ್ ವ್ಯೂ ಮಾಡೆಲ್ ಮದ್ರಸ ವತಿಯಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ವಿದ್ಯಾರ್ಥಿ ಫೆಸ್ಟ್ ಅಂಗವಾಗಿ ನಡೆದ ಸಾಂಸ್ಕೃತಿಕ, ಕಲಾ ಹಾಗೂ ಸಾಹಿತ್ಯ ಸ್ಪರ್ಧೆಗಳು ಹಾಗೂ ಪ್ರದರ್ಶನಗಳು ಯಶಸ್ವಿಯಾಗಿ ಸಂಪನ್ನಗೊಂಡವು.
ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರೂ, ಸೂಡ ಅಧ್ಯಕ್ಷರೂ ಆದ ಕೆ. ಎಂ. ಮುಸ್ತಫ ವಹಿಸಿದ್ದರು. ಮದ್ರಸ ಮುಖ್ಯ ಶಿಕ್ಷಕ ಸಯ್ಯದ್ ಹುಸೈನ್ ಸಅದಿ ಸ್ವಾಗತಿಸಿದರು.
ಸಮಾರೋಪ ಸಮಾರಂಭದಲ್ಲಿ ಅನ್ಸಾರ್ ನಿರ್ದೇಶಕ ಸಿರಾಜ್ ಫ್ಯಾನ್ಸಿ, ಗಲ್ಫ್ ಕಮಿಟಿಯ ಪೂರ್ವ ಸದಸ್ಯ ಹಸೈನಾರ್ ಜೀರ್ಮುಕಿ, ಹಾರಿಸ್ ಬೋರುಗುಡ್ಡೆ, ಉನೈಸ್ ಪಿ.ಸಿ. ವರ್ಲ್ಡ್, ಲತೀಫ್ ಸಖಾಫಿ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಿದ ಫೆಸ್ಟ್ನಲ್ಲಿ ಭಾಷಣ, ಖವ್ವಾಲಿ, ಖಿರಾಅತ್, ಗಾನ, ಕಥಾ ಪ್ರಸಂಗ, ದಫ್ ಪ್ರದರ್ಶನ ಸೇರಿದಂತೆ ವಿವಿಧ ಸ್ಪರ್ಧೆಗಳು ಆಕರ್ಷಕವಾಗಿ ನಡೆದವು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಫೆಸ್ಟ್ನಲ್ಲಿ ನೆಬುಲಸ್ ತಂಡ ಪ್ರಥಮ ಸ್ಥಾನ ಹಾಗೂ ತರಾಬ್ಲಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಸಮಾರೋಪ ಸಮಾರಂಭದಲ್ಲಿ ಗಣ್ಯರು ಟ್ರೋಫಿ ವಿತರಿಸಿದರು.
ವಿದ್ಯಾರ್ಥಿಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಫೆಸ್ಟ್ ಗಮನ ಸೆಳೆಯಿತು.





m
