ಮಧ್ಯಪ್ರದೇಶ, ಫೆಬ್ರವರಿ 24: ಪ್ರಯಾಗ್ರಾಜ್ನ ಮಹಾ ಕುಂಭ ಮೇಳದಿಂದ ಹಿಂದಿರುಗುತ್ತಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ 6 ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದುರಂತ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಈ ಅಪಘಾತ ಮಧ್ಯಪ್ರದೇಶದ ಜಬಲ್ಪೂರದ ಪೆಹರಾ ಟೋಲ್ ನಾಕಾ ಬಳಿ ಬೆಳಗ್ಗೆ ಸುಮಾರು 4:30 ಗಂಟೆಗೆ ಸಂಭವಿಸಿದೆ. ಒಂದು ಕ್ರೂಸರ್ ವಾಹನ ಮತ್ತು ಬಸ್ ನಡುವೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ 6 ಜನರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಬಲ್ಪೂರದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಮೃತಪಟ್ಟವರಲ್ಲಿ ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆಯ ನಿವಾಸಿಗಳಾದ ಬಾಲಚಂದ್ರ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ಮತ್ತು ವಿರೂಪಾಕ್ಷ ಗುಮತಿ (61) ಅವರು ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ ಮುಸ್ತಾಕ್ ಶಿಂಧಿಕುರಬೇಟ್ ಮತ್ತು ಸದಾಶಿವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಭಕ್ತರು ಗೋಕಾಕ್ನಿಂದ ಕ್ರೂಸರ್ ವಾಹನದಲ್ಲಿ ಪ್ರಯಾಗ್ರಾಜ್ನ ಮಹಾ ಕುಂಭ ಮೇಳಕ್ಕೆ ತೆರಳಿದ್ದರು. ವರದಿಗಳ ಪ್ರಕಾರ, ಕ್ರೂಸರ್ ವಾಹನ ಮತ್ತು ಬಸ್ ಎರಡೂ ಭಕ್ತರನ್ನು ಹೊತ್ತೊಯ್ಯುತ್ತಿದ್ದವು. ಈ ಸಂದರ್ಭದಲ್ಲಿ ಕ್ರೂಸರ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಸಿಹೋರಾ-ಖಿಟೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಮಹಾ ಕುಂಭ ಮೇಳಕ್ಕೆ ತೆರಳುತ್ತಿರುವ ಅಥವಾ ಮಹಾ ಕುಂಭ ಮೇಳದಿಂದ ಹಿಂದಿರುಗುತ್ತಿರುವ ಭಕ್ತರ ವಾಹನಗಳು ಇತ್ತೀಚಿನ ದಿನಗಳಲ್ಲಿ ಅಪಘಾತಕ್ಕೀಡಾಗುತ್ತಿವೆ. ಕಳೆದ 10 ದಿನಗಳಲ್ಲಿ ನಡೆದ 9 ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 26 ಭಕ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.




m
