ಬೆಳ್ತಂಗಡಿ (ಮಾ -26):ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯ ವಿರುದ್ಧ ಜಮಾತ್ ಭಾಂದವರಿಗೆ ಜನಜಾಗೃತಿ ಕಾರ್ಯಾಗಾರ ಮಂಗಳವಾರ ರಾತ್ರಿ ಖಿಲರ್ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾದ ನಝೀರ್ ಬಿ. ಎ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಬದ್ರಿಯಾ ಜುಮ್ಮಾ ಮಸೀದಿ ಪೆರಲ್ದಾರಕಟ್ಟೆ ಅಧ್ಯಕ್ಷರಾದ, ಯುವ ನಾಯಕ ನವಾಝ್ ಕಟ್ಟೆ, ಸರ್ಕಾರ ತನ್ನ ಕೋಮು ದ್ವೇಷದ ಮುಂದುವರಿದ ಭಾಗವಾಗಿ ಈಗ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ದೇಶವು ಜಾತ್ಯಾತೀತ ದೇಶವಾಗಿದ್ದು, ಇಲ್ಲಿ ಎಲ್ಲಾ ಧರ್ಮದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸಂವಿಧಾನದಲ್ಲಿ ಧಾರ್ಮಿಕ ಹಕ್ಕುಗಳ ಅನುಸಾರ ಅವಕಾಶ ನೀಡಲಾಗಿದೆ. ಅದರಂತೆಯೇ ಇಲ್ಲಿನ ಮುಸ್ಲಿಮರು ಅವರ ಧಾರ್ಮಿಕ ಆಚಾರ ಮತ್ತು ವಿಚಾರಗಳನ್ನು ಅನುಸರಣೆ ಮಾಡುತ್ತಾರೆ. ಆದರೆ ಒಕ್ಕೂಟ ಸರ್ಕಾರ, ಮುಸ್ಲಿಂ ಸಮುದಾಯದ ವಿರೋಧದ ನಡೆವೆಯೂ ಹಠಕ್ಕೆ ಬಿದ್ದು ವಕ್ಫ್ ತಿದ್ದುಪಡಿ ಬಿಲ್ ತರುವ ಮೂಲಕ ಮುಸ್ಲಿಮರ ಸಂವಿಧಾನಿಕ ಮತ್ತು ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ವಕ್ಫ್ ಆಸ್ತಿಗಳು ಮುಸ್ಲಿಂ ಸಮಾಜದ ಉಳ್ಳವರು, ಸಮಾಜದಲ್ಲಿ ಇರುವ ಬಡವರು ಮತ್ತು ನಿರ್ಗತರಿಗಾಗಿ ಸಹಾಯ ಮಾಡಲಿಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿ ಇದು. ಈ ಆಸ್ತಿಗಳ ರಕ್ಷಣೆಗಾಗಿ ಸಂಘಟಿತ ಹೋರಾಟಕ್ಕೆ ಕರೆ ನೀಡಿದರು. ಈ ಬಿಲ್ ಸಂವಿಧಾನ ವಿರೋಧಿ ಮತ್ತು ಭಾರತದಲ್ಲಿ 20 ಕೋಟಿಗೂ ಹೆಚ್ಚಿರುವ ಮುಸ್ಲಿಮರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.




m

ಬಿಜೆಪಿ ನೇತೃತ್ವದ NDA ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2024 ರಲ್ಲಿರುವ ಮಾರಕ ಅಂಶಗಳು ಯಾವುವು?, ಇದರ ಹಿಂದೆ ಅಡಗಿರುವ ಶಡ್ಯಂತರ ಏನು? ಇದನ್ನು ವಿರೋಧಿಸುವ ವಿಧಾನ ಹೇಗೆ.? ಮತ್ತು ಮಸೂದೆಯನ್ನು ತಿರಸ್ಕಾರ ಮಾಡಲು ಮುಸ್ಲಿಮರಿಗೆ ಮುಂದಿರುವ ಮಾರ್ಗೋಪಾಯಗಳು ಯಾವುವು ? ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಖಿಲರ್ ಜುಮ್ಮಾ ಮಸೀದಿ ಖತೀಬರಾದ ಹನೀಫ್ ಫೈಝಿ, ಮಸೀದಿ ಪದಾಧಿಕಾರಿಗಳು, ಜಮಾತ್ ಬಾಂಧವರು ಉಪಸ್ಥಿತರಿದ್ದರು.