ಬೆಳ್ತಂಗಡಿ, ಜೂ.14: ಸಮಾಜದ ನೈತಿಕ ಹಾಗೂ ಧಾರ್ಮಿಕ ಅಡಿಪಾಯವನ್ನು ಬಲಪಡಿಸುವಲ್ಲಿ ಮದರಸ ಅಧ್ಯಾಪಕರಾದ ಮುಅಲ್ಲಿಂಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಕಷ್ಟಕರ ಜೀವನದ ಬಗ್ಗೆ ಸಮಾಜ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಬೆಳ್ತಂಗಡಿ ಪೇರಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ನವಾಝ್ ಕಟ್ಟೆ ನವಾಝ್ ಕಟ್ಟೆ ಅಭಿಪ್ರಾಯಪಟ್ಟಿದ್ದಾರೆ.
ಮುಅಲ್ಲಿಂ ಡೇ ಅಂಗವಾಗಿ ಶುಭಾಶಯ ಸಂದೇಶ ನೀಡಿದ ಅವರು, ಮದರಸ ಶಿಕ್ಷಣದ ಮೂಲಕ ಮಕ್ಕಳಲ್ಲಿ ಧಾರ್ಮಿಕ ಜ್ಞಾನ, ನೈತಿಕ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಕಾರ್ಯವನ್ನು ಮುಅಲ್ಲಿಂಗಳು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಅವರಲ್ಲಿ ಬಹುತೇಕರು ಅತ್ಯಂತ ಕಡಿಮೆ ಸಂಬಳದಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಜೀವನ ವೆಚ್ಚ, ಮಕ್ಕಳ ಶಿಕ್ಷಣ, ವೈದ್ಯಕೀಯ ಖರ್ಚು ಹಾಗೂ ಕುಟುಂಬ ನಿರ್ವಹಣೆಯ ಹೆಚ್ಚುತ್ತಿರುವ ಹೊರೆ ನಡುವೆ ಅನೇಕ ಮುಅಲ್ಲಿಂಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೂ, ಸಮಾಜದ ಮಕ್ಕಳ ಭವಿಷ್ಯ ನಿರ್ಮಾಣದ ಮಹತ್ವದ ಕಾರ್ಯದಿಂದ ಹಿಂದೆ ಸರಿಯುತ್ತಿಲ್ಲ. ತಮ್ಮ ವೈಯಕ್ತಿಕ ಕಷ್ಟಗಳನ್ನು ಮರೆತು ಶಿಕ್ಷಣ ಸೇವೆಯಲ್ಲಿ ತೊಡಗಿರುವ ಅವರ ತ್ಯಾಗ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಸಮಾಜದ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಗೌರವ ನೀಡುವುದು ಕೇವಲ ಮಾತಿನಲ್ಲಲ್ಲ, ಅವರ ಜೀವನಮಟ್ಟ ಸುಧಾರಣೆಗೆ ಅಗತ್ಯವಾದ ಆರ್ಥಿಕ ಹಾಗೂ ಸಾಮಾಜಿಕ ಬೆಂಬಲ ಒದಗಿಸುವ ಮೂಲಕವೂ ವ್ಯಕ್ತವಾಗಬೇಕು. ಮದರಸ ಅಧ್ಯಾಪಕರ ಸೇವೆಯನ್ನು ಗುರುತಿಸಿ ಅವರಿಗೆ ಸೂಕ್ತ ಗೌರವ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು ಸಮುದಾಯದ ಜವಾಬ್ದಾರಿಯಾಗಿದೆ ಎಂದು ನವಾಝ್ ಕಟ್ಟೆ ಅಭಿಪ್ರಾಯಪಟ್ಟರು.
“ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಾ, ಸಮಾಜದ ಮಕ್ಕಳ ಭವಿಷ್ಯವನ್ನು ರೂಪಿಸುವ ಮಹಾನ್ ಸೇವಕರೇ ಮುಅಲ್ಲಿಂಗಳು” ಎಂದು ಹೇಳಿದ ಅವರು, ಎಲ್ಲಾ ಮುಅಲ್ಲಿಂಗಳಿಗೆ ಮುಅಲ್ಲಿಂ ಡೇಯ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿ, ಅವರ ಜ್ಞಾನಸೇವೆ, ತ್ಯಾಗ ಮತ್ತು ಸಮರ್ಪಣೆಗೆ ಅಲ್ಲಾಹನು ಅಪಾರ ಪ್ರತಿಫಲವನ್ನು ನೀಡಲಿ ಎಂದು ಪ್ರಾರ್ಥಿಸಿದರು.




m

