“ವಿದ್ಯಾರ್ಥಿಗಳ ಕನಸುಗಳಿಗೆ ದ್ರೋಹ ಮಾಡಿದ ನೀಟ್ ಅವ್ಯವಹಾರ: ಶಿಕ್ಷಣ ವ್ಯವಸ್ಥೆ ಉಳಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯ”
ಬೆಳ್ತಂಗಡಿ:ರಾಷ್ಟಮಟ್ಟದಲ್ಲಿ NEET UG ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ (ತಾಲೂಕು)ಸಮಿತಿ ವತಿಯಿಂದ ರ‍್ಯಾಲಿ ಹಾಗೂ ವಿದ್ಯಾರ್ಥಿ ಪ್ರತಿಭಟನೆ ಬೆಳ್ತಂಗಡಿಯಲ್ಲಿ 15 ಮೇ 2025ರ ಶುಕ್ರವಾರ ಸಂಜೆ 4 ಗಂಟೆಗೆ ನಡೆಯಿತು.
ಸಮಿತಿಯು ತಹಶೀಲ್ದಾರ್ ಕಛೇರಿ ಭೇಟಿ ನೀಡಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣವನ್ನು ಖಂಡಿಸಿ ಹಾಗೂ ನ್ಯಾಯಸಮ್ಮತ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಷ್ಟ್ರಪತಿ ಇವರಿಗೆ ಬೆಳ್ತಂಗಡಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಬಳಿಕ ತಾಲೂಕು ಮಿನಿವಿಧಾನಸೌಧದಿಂದ ಬೆಳ್ತಂಗಡಿ ಬಸ್ಟಾಂಡ್ ವರೆಗೆ ವಿದ್ಯಾರ್ಥಿ ರ‍್ಯಾಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತಾನಾಡಿದ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಅವರು NEET ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ವೇದಿಕೆಗಳಾಗಿವೆ. ವಿದ್ಯಾರ್ಥಿಗಳು ಹಲವು ವರ್ಷಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಕನಸುಗಳೊಂದಿಗೆ ಈ ಪರೀಕ್ಷೆಗೆ ಸಿದ್ಧರಾಗುತ್ತಾರೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮಗಳು ಪ್ರಾಮಾಣಿಕವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ವಿಶ್ವಾಸವನ್ನು ಕುಗ್ಗಿಸುತ್ತಿವೆ ಮಾತ್ರವಲ್ಲದೆ, ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ದುರ್ಬಲಗೊಳಿಸುತ್ತಿವೆ.

ಈ ಘಟನೆಯಿಂದಾಗಿ ಸತ್ಯನಿಷ್ಠ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಅವರಲ್ಲಿ ಮಾನಸಿಕ ಒತ್ತಡ ಮತ್ತು ಆತಂಕ ಮನೆಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ನ್ಯಾಯವನ್ನು ಎತ್ತಿ ಹಿಡಿಯಲು ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಉನ್ನತ ಮಟ್ಟದ ಹಾಗೂ ಪಾರದರ್ಶಕ ತನಿಖೆ ನಡೆಸಿ ಪ್ರಕರಣದ ಸಂಚು ರೂಪಿಸಿದವರು ಮತ್ತು ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ಭದ್ರತಾ ಕ್ರಮಗಳನ್ನು ಅಳವಡಿಸಬೇಕು ಎಂದು ದಿಕ್ಸೂಚಿ ಭಾಷಣ ಮಾಡಿದರು.
ಪ್ರಸ್ತುತ ಕಾರ್ಯಕ್ರಮವನ್ನು ಡಿವಿಷನ್ ಕಾರ್ಯದರ್ಶಿ ಹಾಫಿಳ್ ಬಾಸಿತ್ ಸಖಾಫಿ ದುಆದ ಮೂಲಕ ಚಾಲನೆ ನೀಡಿದರು.
ಎಸ್ಸೆಸ್ಸೆಫ್ ರಾಜ್ಯ ವೆಫಿ ಕಾರ್ಯದರ್ಶಿ ರಶೀದ್ ಮಡಂತ್ಯಾರು ಉದ್ಘಾಟಿಸಿದರು,
ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ವಿದ್ಯಾರ್ಥಿ ರಾಝಿಕ್ ಮಡಂತ್ಯಾರು ನೀಟ್ ಪರೀಕ್ಷೆಯ ಅವ್ಯವಹಾರದ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಇಸಾಕ್ ಅಳದಂಗಡಿ ವಹಿಸಿದ್ದರು, SYS ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ,
ರಾಜ್ಯ ಮಾಜಿ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ಮಾಜಿ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು, ಜಿಲ್ಲಾ ಕಾರ್ಯದರ್ಶಿ ಮುಬೀನ್ ಉಜಿರೆ,KCF ನಾಯಕರಾದ ರಫೀಕ್ ತುರ್ಕಳಿಕೆ,ಖಲಂದರ್ ಪರಪ್ಪು,SYS ನಾಯಕರಾದ ಸಿದ್ದೀಕ್ ಪರಪ್ಪು ಹಾಗೂ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಡಿವಿಷನ್ ನಾಯಕರು ಭಾಗವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಸ್ವಾಗತಿಸಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ನಾಸೀರ್ ಪಡ್ಡಂದಡ್ಕ ಧನ್ಯವಾದವಿತ್ತರು.