Featured, ಅಂಕಣ, ಸ್ಥಳೀಯ

“ಹಿಜಾಬ್ ಹಕ್ಕು ಉಳಿಸಿದ ಸರ್ಕಾರ; ಶಿಕ್ಷಣದಲ್ಲಿ ಸಮಾನತೆ ಉಳಿಯಲಿ”

ರಾಜ್ಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಹಿಜಾಬ್ ಎನ್ನುವುದು ಇತ್ತೀಚೆಗೆ ಹುಟ್ಟಿದ ಪದ್ಧತಿ ಅಲ್ಲ; ಅದು ತಲೆತಲಾಂತರಗಳಿಂದಲೂ ಪಾಲಿಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಯ ಭಾಗ. ದೇಶದ ವಿವಿಧ ರಾಜ್ಯಗಳಲ್ಲಿಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಶಿಕ್ಷಣ ಪಡೆಯುತ್ತಿದ್ದು, ಇದುವರೆಗೆ ಅದರಿಂದ ಯಾವುದೇ ಗೊಂದಲ ಅಥವಾ ತಾರತಮ್ಯ ಸೃಷ್ಟಿಯಾದ ಉದಾಹರಣೆಗಳಿಲ್ಲ.

ಈ ಹಿಂದೆ ಬಿಜೆಪಿ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ನಿರ್ಧಾರ ಕೈಗೊಂಡಾಗ, ಅದು ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ವಿವಾದ ಮತ್ತು ಗೊಂದಲಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ರಾಜಕೀಯ ಲಾಭವನ್ನು ಮುಂದಿಟ್ಟುಕೊಂಡು ಈ ವಿಚಾರವನ್ನು ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ತಳ್ಳಲಾಗಿದೆ ಎಂಬ ಅಭಿಪ್ರಾಯಗಳು ಸಮಾಜದ ವಿವಿಧ ವಲಯಗಳಿಂದ ವ್ಯಕ್ತವಾಗಿದ್ದವು.

ಧರ್ಮಕ್ಕೆ ಸಂಬಂಧಿಸಿದ ಆಚರಣೆಗಳು ಮತ್ತು ಗುರುತುಗಳನ್ನು ಗೌರವಿಸುವುದು ಭಾರತದ ಸಂವಿಧಾನದ ಆತ್ಮವಾಗಿದೆ. ಜನಿವಾರ, ಹಿಜಾಬ್ ಸೇರಿದಂತೆ ವಿವಿಧ ಧಾರ್ಮಿಕ ಗುರುತುಗಳು ಸಮಾಜದಲ್ಲಿ ಸಹಬಾಳ್ವೆಯ ಪ್ರತೀಕವಾಗಿರಬೇಕು ಹೊರತು ಭೇದಭಾವ ಅಥವಾ ದ್ವೇಷದ ಕಾರಣವಾಗಬಾರದು. ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಚಾರದ ವೇದಿಕೆಗಳಾಗದೆ, ವಿದ್ಯಾರ್ಥಿಗಳ ಕನಸುಗಳನ್ನು ಬೆಳೆಸುವ ಪವಿತ್ರ ಸ್ಥಳಗಳಾಗಿರಬೇಕು ಎಂಬುದು ಸಮಾಜದ ಆಶಯವಾಗಿದೆ.

ಕೆಲವರು ಕೇಸರಿ ಶಾಲು ಅಥವಾ ಇತರ ಚಿಹ್ನೆಗಳ ಹೆಸರಿನಲ್ಲಿ ಪ್ರತಿರೋಧದ ರಾಜಕೀಯ ಮಾಡಲು ಮುಂದಾಗುತ್ತಿರುವುದು ಶಿಕ್ಷಣದ ವಾತಾವರಣಕ್ಕೆ ಒಳ್ಳೆಯದಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಧಾರ್ಮಿಕ ಆಚರಣೆ ಎಂಬ ಹೆಸರಿನಲ್ಲಿ ಅನಗತ್ಯ ಪ್ರಚೋದನೆಗಳನ್ನು ಸೃಷ್ಟಿಸುವುದಕ್ಕಿಂತ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ.

ಇಂದು ಎಲ್ಲಾ ಧರ್ಮಗಳ ವಿದ್ಯಾರ್ಥಿಗಳು ಸಮಾನವಾಗಿ ಶಿಕ್ಷಣದಲ್ಲಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಹಿಜಾಬ್ ವಿಚಾರವನ್ನು ಮತ್ತೆ ರಾಜಕೀಯ ವಿವಾದಕ್ಕೆ ತಳ್ಳದೇ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಯನ್ನು ಗೌರವಿಸಿ, ವಿದ್ಯಾರ್ಥಿನಿಯರಿಗೆ ಶಿಕ್ಷಣದ ಹಕ್ಕನ್ನು ನಿರ್ಬಂಧವಿಲ್ಲದೆ ಮುಂದುವರಿಸಲು ಅವಕಾಶ ನೀಡಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಹಲವರು ಸ್ವಾಗತಿಸಿದ್ದಾರೆ.

ಬರಹ:- ಇಕ್ಬಾಲ್ ಬಾಳಿಲ ರಾಜ್ಯ ಉಪಾಧ್ಯಕ್ಷರು, SKSSF ಕರ್ನಾಟಕ

m

Related Posts