ಮಹಾಜನರೇ ಮಹಾರಾಜರಾಗಲು ನಮ್ಮೂರಿನವರೇ ಬೇಕು
ಕರಾವಳಿ ಹಾಗೂ ಮಲೆನಾಡಿನ ಕೊಂಡಿಯಾಗಿರುವ ಸುಳ್ಯ ವರ್ಷಪೂರ್ತಿ ಹಬ್ಬ – ಹರಿದಿನ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಉತ್ಸವ, ಶಾಲಾ – ಕಾಲೇಜು ಸಮಾರಂಭ, ಸಮಾಜ ಸೇವಾ ಕಾರ್ಯಗಳಿಂದಲೇ ಬ್ಯುಸಿ ಆಗಿರುವ ಊರು.
ಹೀಗೆ ವರ್ಷಪೂರ್ತಿ ಬ್ಯುಸಿ ಆಗಿರಲು ಕಾರಣ ನಮ್ಮೂರಿನ ವ್ಯಾಪಾರಿಗಳೇ. ದುಡಿದ ಹಣದಲ್ಲಿ ಒಂದಂಶವನ್ನು ಊರಿಗಾಗಿ ವಿನಿಯೋಗಿಸುತ್ತಾರೆ ನಮ್ಮ ವರ್ತಕರು, ನಮ್ಮ ಉದ್ಯಮಿಗಳು.
ಇವರ ಸಹಕಾರವಿಲ್ಲದೆ ಯಾವ ಕಾರ್ಯಕ್ರಮವೂ ಅಪೂರ್ಣವೇ. ಆದರೆ ವಾಸ್ತವ ನೋಡಿ, ಇಂದಿನ ಪರಿಸ್ಥಿತಿಯಲ್ಲಿ ಇದೇ ವರ್ತಕರು ಸಂಕಷ್ಟದಲ್ಲಿದ್ದಾರೆ. ವ್ಯಾಪಾರ ಕೈಕೊಟ್ಟು, ಕೈಚೆಲ್ಲಿ ಕೂತಿದ್ದಾರೆ. ಕಾರಣ ಏನು ಗೊತ್ತೇ?
ಆನ್ಲೈನ್ ಖರೀದಿ ಮತ್ತು ಚೈನ್ ಸ್ಟೋರ್ಗಳ ಹೊಡೆತ, ಇತ್ತೀಚಿನ ಕೆಲವು ವರ್ಷಗಳಲ್ಲಿ ಆನ್ಲೈನ್ ಖರೀದಿ ಮತ್ತು ಚೈನ್ ರಿಟೇಲ್ ಕಂಪೆನಿಗಳ ವ್ಯಾಪಾರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಜನರು ಸಹ ಸುಲಭತೆಗಾಗಿ ಆನ್ಲೈನ್ನಲ್ಲಿ ಅಥವಾ ದೊಡ್ಡ ಮಳಿಗೆಗಳಲ್ಲಿ ಖರೀದಿಸುತ್ತಿದ್ದಾರೆ. ಇದರ ಪರಿಣಾಮ, ನಮ್ಮ ದಿನಸಿ ಅಂಗಡಿಗಳು, ತರಕಾರಿ ಮತ್ತು ಹಣ್ಣು-ಹಂಪಲು ವ್ಯಾಪಾರಿಗಳು, ಬಟ್ಟೆ ಮಳಿಗೆಗಳು, ಎಲೆಕ್ಟ್ರಿಕಲ್, ಮೊಬೈಲ್ ಮತ್ತು ಹಾರ್ಡ್ ವೇರ್ ಅಂಗಡಿಗಳು, ಸಣ್ಣ ಉದ್ಯಮಿಗಳ ಮಾರಾಟದ ಪ್ರಮಾಣ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.
ಇವರೆಲ್ಲಾ ಯಾರು – ನಮ್ಮ ಸ್ನೇಹಿತರು, ನೆರೆಹೊರೆಯವರು, ಬಂಧುಗಳು ಅಥವಾ ನಮ್ಮ ಸಂಬಂಧಿಕ ಕೆಲಸ ಮಾಡುವ ಅಂಗಡಿ. ಇವರಿಗೆ ವ್ಯಾಪಾರ ಕಡಿಮೆಯಾಗುತ್ತಾ ಹೋದರೆ ಪರಿಸ್ಥಿತಿಯ ನೇರ ಹೊಡೆತ ನಮ್ಮ ತಲೆ ಮೇಲೆಯೇ ಬೀಳುತ್ತದೆ. ಇದರ ಅರಿವು ನಮಗಿರಬೇಕು.
ಆನ್ ಲೈನ್ ಖರೀದಿ – ಮತ್ತೊಮ್ಮೆ ಸ್ವಾತಂತ್ರ್ಯ ಸಮಯ?
ನಾವೆಲ್ಲಾ ಇಂದು ಆನ್ ಲೈನ್ ಖರೀದಿ ಹಿಂದೆ ಬಿದ್ದಿದ್ದೇವೆ. ಈ ಆನ್ ಲೈನ್ ಖರೀದಿಯ ಹಿಂದಿರುವ ಶಕ್ತಿ ಯಾರು ಗೊತ್ತೇ? ಅದು ಬಹುತೇಕ ವಿದೇಶಿ ಕಂಪೆನಿಗಳು. ಅಂದರೆ ನಾವು ಆನ್ ಲೈನ್ ಶಾಪಿಂಗ್ ನಲ್ಲಿ ಖರೀದಿ ಮಾಡುವಾಗ ನೀಡುವ ಹಣ ವಿದೇಶಗಳ ಪಾಲಾಗುತ್ತಿವೆ. ದೇಶದೊಳಗಡೆ ವ್ಯಾಪಾರ ಕಡಿಮೆಯಾಗಿ, ವಿದೇಶಿ ಕಂಪೆನಿಗಳ ವ್ಯಾಪಾರ ಹೆಚ್ಚಾದರೆ ಏನಾದೀತು? ಮತ್ತೊಮ್ಮೆ ಸ್ವಾತಂತ್ರ್ಯ ಸಮರ ಘೋಷಿಸುವ ದಿನ ಬರಬಹೊದೋ ಏನೋ?
ನಮ್ಮ ಕೈಗೆ ಬರುವ ದುಡ್ಡು ನಮ್ಮ ದೇಶದ ಇತರ ವರ್ಗಕ್ಕೂ ಸಿಗಬೇಕಾದರೆ, ಇಲ್ಲಿಯೇ ವ್ಯಾಪಾರ ವಹಿವಾಟು ನಡೆಸಬೇಕು.
ಯೋಚಿಸಬೇಕಾದ ಪ್ರಶ್ನೆ:
ಹಬ್ಬದ ಸಮಯದಲ್ಲಿ ಕೊಡುಗೆ ನೀಡದ ದೊಡ್ಡ ಕಂಪೆನಿಗಳಿಂದ ನಾವು ಖರೀದಿ ಮಾಡುತ್ತಿದ್ದೇವೆ. ಸಹಾಯ ಮಾಡುವವರಿಂದ ಖರೀದಿ ನಿಲ್ಲಿಸಿದ್ದೇವೆ. ನಮ್ಮ ಊರಿನ ವ್ಯಾಪಾರಿಗಳು ಸಂಕಷ್ಟದಲ್ಲಿದ್ದರೆ — ಅದರ ಹೊಣೆ ಯಾರದ್ದು? ಅವರಿಗೆ ನಾವೇ ಬೆಂಬಲ ನೀಡುತ್ತಿಲ್ಲ ಯಾಕೆ? ನಮ್ಮ ಊರಿನ / ದೇಶದ ಆರ್ಥಿಕತೆಯನ್ನು ನಾವೇ ಸ್ವತಃ ದುರ್ಬಲಗೊಳಿಸುತ್ತಿದ್ದೇವೆಯೇ? ದೀರ್ಘಾವಧಿಯಲ್ಲಿ ಎಷ್ಟೆಲ್ಲಾ ಅಪಾಯಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೀರಾ?
ಸುಳ್ಯದಿಂದಲೇ ಶುರುವಾಗಲಿ ಆತ್ಮನಿರ್ಭರತೆ:
ನಾವು ‘ಆತ್ಮನಿರ್ಭರ ಭಾರತ’ ಎಂದು ಮಾತನಾಡುತ್ತೇವೆ. ಆದರೆ ಅದರ ನಿಜವಾದ ಅರ್ಥ —
ಆತ್ಮನಿರ್ಭರ ಸುಳ್ಯ, ಆತ್ಮನಿರ್ಭರ ಸಮಾಜ. ನಮ್ಮ ಊರಿನ ವ್ಯಾಪಾರ ಬೆಳೆಸಿದರೆ ಊರಿನಲ್ಲಿ ಹಣ ಸುತ್ತಾಡುತ್ತದೆ. ಯುವಕರಿಗೆ ಉದ್ಯೋಗ ಸಿಗುತ್ತದೆ. ಸ್ಥಳೀಯ ಉದ್ಯಮ ಬೆಳೆಯುತ್ತದೆ. ಊರಿನ ಉತ್ಸವಗಳು ಇನ್ನಷ್ಟು ವೈಭವದಿಂದ ನಡೆಯುತ್ತವೆ.
ಬದಲಾವಣೆಗೆ ಕೈಜೋಡಿಸಿ:
ಈಗ ಸಮಯ ಬಂದಿದೆ — ನಮ್ಮ ವ್ಯಾಪಾರ ವಹಿವಾಟು ನಮ್ಮ ಊರಿನವರ ಜೊತೆಯೇ ಮಾಡೋಣ!
- – ದಿನಸಿ ವಸ್ತುಗಳನ್ನು ಖರೀದಿಸಲು ನಮ್ಮ ಊರಿನ ಅಂಗಡಿಗೆ ಹೋಗೋಣ.
- – ತರಕಾರಿ, ಹಣ್ಣು-ಹಂಪಲುಗಳನ್ನು ಸ್ಥಳೀಯ ರೈತರಿಂದ ಮತ್ತು ಮಾರಾಟಗಾರರಿಂದ ಕೊಳ್ಳೋಣ.
- – ಬಟ್ಟೆ, ವಿದ್ಯುತ್ ಉಪಕರಣ, ಮೊಬೈಲ್ — ಎಲ್ಲವೂ ನಮ್ಮ ಊರಿನ ಮಳಿಗೆಗಳಲ್ಲಿ ದೊರೆಯುತ್ತವೆ.
- – ಶಾಪಿಂಗ್ ಮಾಡಿದಾಗ ನಮ್ಮ ಊರಿನ ವ್ಯಾಪಾರಿಗಳಿಂದ ಖರೀದಿಸಿ, ಅವರ ಜೀವನವನ್ನು ಬೆಂಬಲಿಸೋಣ.
ಎಷ್ಟೆಲ್ಲಾ ಪ್ರಯೋಜನ:
ಆತ್ಮನಿರ್ಭರ ಪುತ್ತೂರಿಗೆ ಕೈಜೋಡಿಸಿದರೆ ಅದರ ಪ್ರಯೋಜನ ನಮ್ಮ ಮೇಲೆಯೇ ಆಗಲಿದೆ. ಸ್ಥಳೀಯ ವ್ಯಾಪಾರ ಹೆಚ್ಚಿದಾಗ, ಊರಿನ ಜನರು ಸಂತೋಷವಾಗಿ ಜೀವನ ಸಾಗಿಸುತ್ತಾರೆ. ಅವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಅವರು ಮತ್ತೆ ಹಬ್ಬಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಹಾಯ ಮಾಡುವ ಶಕ್ತಿ ಪಡೆಯುತ್ತಾರೆ. ಅಂದರೆ ಒಬ್ಬ ವ್ಯಾಪಾರಿ ಉಳಿದರೆ – ಊರು ಉಳಿಯುತ್ತದೆ.
ಬರಹ : ಅನೂಪ್ ಸುಳ್ಯ






m
