Featured, ಅಂಕಣ, ಲೇಖನ, ಸ್ಥಳೀಯ

ಮಾದಕ – ಮಾರಕ – ಹಂತಕ

ಒಂದು ಹನಿ ಮೋಹಕೆ

ಬದುಕನ್ನೇ ಹರಾಜು ಹಾಕಿ

ಕನಸುಗಳ ತೋಟವ ಸುಟ್ಟು

ಮೆದುಳಿಲ್ಲದ ಮನುಷ್ಯನಾಗಿ

ನರಹತ್ಯೆಯ ಮೃತ್ಯುಯಲಿ 

ಮುಳುಗಿದ ಆ ಮನುಷ್ಯ 

ಅವನೇ- ಮಾದಕ ವ್ಯಸನಿ.

ಜನುಮ ಕೊಟ್ಟ ತಾಯಿಯನ್ನ ಸ್ವಂತ ಮಗ ಬರ್ಬರವಾಗಿ ಚಾಕಿನಿಂದ ಇರಿದು ಕೊಂದು ಮೃತದೇಹವನ್ನು ತುಂಡುಗಳಾಗಿ ಮಾಡಿ ಚೀಲದಲ್ಲಿ ತುಂಬಿ ನದಿಗೆ ಎಸೆಯಲಾಗಿತ್ತು. 

10ನೇ ತರಗತಿ ವ್ಯಾಸಂಗ ಮಾಡುತ್ತಿರುವ ನಾಲ್ಕು ಆಪ್ತ ಸ್ನೇಹಿತರಲ್ಲಿ ಓರ್ವನನ್ನ ಉಳಿದ ಮೂವರು ಸೇರಿ ಕ್ರೂರವಾಗಿ ಹತ್ಯೆ ಮಾಡಿದರು. 

ಪವಿತ್ರ ರಮದಾನ್ ತಿಂಗಳಲ್ಲಿ ಇಫ್ತಾರ್ ಸಮಯದ ವೇಳೆ ತನ್ನ ಪತಿಗೆ ಬೇಕಾದ ಫಲಹಾರಗಳನ್ನು ಬಡಿಸುತ್ತಿದ್ದ ಪತ್ನಿಯನ್ನು ದಿಢೀರನೆ ಪತಿ ಸ್ವಂತ ಮಗುವಿನ ಕಣ್ಣ ಮುಂದೆ ಕೊಂದುಹಾಕಿ ಪರಾರಿಯಾದ. ಇದೇನೂ ಸಿನಿಮಾ ಸ್ಕ್ರಿಪ್ಟ್ ಗಳಲ್ಲ, ಸೀರಿಯಲ್ ಸ್ಟೋರಿಯಲ್ಲ ಇತ್ತೀಚೆಗೆ ನಮ್ಮ ಸಮಾಜದಲ್ಲಿ ನಡೆದ ಈಗಲೂ ನಡೆಯುತ್ತಿರುವ ಹೃದಯಾಘಾತಕ ವಿಷಾದನೀಯ ಘಟನೆಗಳು. 

ಒಂದೆರಡಲ್ಲ ನೂರಾರು ಸಂಭವಗಳು ದಿನನಿತ್ಯ ನಮ್ಮ ದೇಶದಲ್ಲಿ ಇತರ ದೇಶಗಳಲ್ಲಿ ನಡೆಯುತ್ತಲೇ ಇದೆ. ಕಾರಣ ಬೇರೇನೂ ಅಲ್ಲ. ಮಾದಕ ದ್ರವ್ಯಗಳ ಬಳಕೆ ಅಥವಾ ಸರಳವಾಗಿ ಹೇಳುವುದಾದರೆ ಡ್ರಗ್ಸ್ ಅಡಿಕ್ಷನ್.  

ಹೆತ್ತ ಮಾತಾಪಿತರು, ಬಾಲ ಸಂಗಾತಿಯರು, ಒಡಹುಟ್ಟಿದವರು, ಆಪ್ತ ಸ್ನೇಹಿತರು ಹೀಗೆ ಪರಿಚಿತರನ್ನು ಅಪರಿಚಿತರೆಲ್ಲರನ್ನ ಸೊಳ್ಳೆಯನ್ನು ಕೊಲ್ಲುವಂತೆ ಬಹಳ ಕ್ಷುಲ್ಲಕವಾಗಿ ಕೊಲ್ಲುವ ಕ್ರೂರ ಶಕ್ತಿ ಆ ಮಾದಕಕ್ಕಿದೆ. ಕೊಲ್ಲುವುದಕ್ಕೆ ಕೊನೆಗೊಳ್ಳುವುದಿಲ್ಲ ಒಡಹುಟ್ಟಿದ ಸಹೋದರಿಯರನ್ನ ಸ್ವಂತ ತಾಯಿಯನ್ನು ಕಾಮತೃಷೆ ಈಡೇರಿಸಲು ಅತ್ಯಾಚಾರ ಎಸೆಗುವ ಮೃಗ ಸಮಾನ ನೀಚ ರಾಕ್ಷಸರು ಬೆಳೆಯುತ್ತಿರುವ ಕರಾಳ ಸಮಾಜದಲ್ಲಿ ಇಂದು ನಾವಿದ್ದೇವೆ. ಮಾದಕ ವಸ್ತುಗಳು ಕನಸುಗಳನ್ನು ಕಸಿದುಕೊಳ್ಳುವ ಮೌನ ಹಂತಕವಾಗಿ ಬೆಳೆಯುತ್ತಲೇ ಇದೆ.

ಮನುಷ್ಯನ ಜೀವನವೆಂದರೆ ಒಂದು ಅನಂತ ಸಾಗರ. ಅದರಲ್ಲಿ ಸಂತೋಷದ ಅಲೆಗಳು, ದುಃಖದ ಹೊಡೆತಗಳು, ಕನಸುಗಳ ತೇರುಗಳು ಎಲ್ಲವೂ ಸೇರುತ್ತವೆ. ಆದರೆ, ಈ ಸಾಗರದಲ್ಲಿ “ಮಾದಕ ವಸ್ತು” ಎಂಬೊಂದು ಕತ್ತಲೆಯ ಭೂತ ಪ್ರವೇಶಿಸಿದಾಗ, ಬದುಕಿನ ದೋಣಿ ದಿಕ್ಕು ತಪ್ಪಿ, ಕತ್ತಲೆಯ ಆಳಕ್ಕೆ ಮುಳುಗುತ್ತದೆ.

ಮಾದಕ ವಸ್ತು — ಅದು ಕೇವಲ ಒಂದು ರಾಸಾಯನಿಕವಲ್ಲ; ಅದು ನಿಶ್ಯಬ್ದವಾಗಿ ಕನಸುಗಳನ್ನು ಕಸಿದುಕೊಳ್ಳುವ , ಕೌಟುಂಬಿಕ ಸಂಬಂಧವನ್ನು ಒಡೆದುಹಾಕುವ, ಹೃದಯದ ಬೆಳಕನ್ನು ಆರಿಸುವ ಮೌನ ಹಂತಕ. ಕೆಲವರು ಕುತೂಹಲದಿಂದ, ಕೆಲವರು ಒತ್ತಡದಿಂದ, ಕೆಲವರು ಜೀವನದ ನೋವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಈ ಮಾರಕ ಮತ್ತಿಗೆ ತುತ್ತಾಗುವರು. ಮೊದಲ ದಿನ ಅದು ತಾತ್ಕಾಲಿಕ ಉಲ್ಲಾಸ ಕೊಡುತ್ತದೆ. ಮನಸ್ಸು ಹಗುರವಾಗುತ್ತದೆ, ಯೋಚನೆಗಳು ಮೋಡಗಳಲ್ಲಿ ತೇಲುತ್ತವೆ. ಆದರೆ ದಿನಗಳು ಸಾಗಿದಂತೆ, ಅದು ದೇಹವನ್ನು ಬಲಹೀನಗೊಳಿಸಿ, ಮನಸ್ಸನ್ನು ಬಂಧಿಸಿ, ಆತ್ಮವನ್ನೇ ಬಡಿದು ಬೀಳಿಸುತ್ತದೆ. ಹೃದಯದ ಚಲನೆ ಅಸ್ತವ್ಯಸ್ತವಾಗುತ್ತದೆ, ಯಕೃತ್ ನಿಧಾನವಾಗಿ ನಾಶವಾಗುತ್ತದೆ, ಮೆದುಳು ತನ್ನ ತೇಜಸ್ಸನ್ನು ಕಳೆದುಕೊಳ್ಳುತ್ತದೆ. ಮುಖಗಳಲ್ಲಿ ನಗು ಕಣ್ಮರೆಯಾಗುತ್ತದೆ, ಪ್ರೀತಿಯ ಬದಲು ಕ್ರೂರತೆಯ ಕರಿ ನೆರಳು ಆವರಿಸುತ್ತದೆ.

ಮನೆಯಲ್ಲಿ ಗಾಂಜಾ, ವಾಹನದಲ್ಲಿ ಗಾಂಜಾ, ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸರಬರಾಜು, ವಿಮಾನದಲ್ಲಿ, ಬಸ್ಸು, ರೈಲು ನಿಲ್ದಾಣಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಅಫೀಮುಗಳದ್ದೇ ಸುದ್ದಿ. 

ಭಯಭೀತಿಯ ವಾತಾವರಣ, ನೆಮ್ಮದಿ ಇಲ್ಲ. ಸಮಾಜದ ಸುರಕ್ಷತೆ ಬೀದಿಪಾಲಾಗಿದೆ. 

ಹಿಂದೆ ವಿದಾರ್ಥಿ, ಯುವಕರಲ್ಲಿ ಅಸಾಮಾನ್ಯವಾಗಿದ್ದ ಮಾದಕ ದ್ರವ್ಯಗಳ ಉಪಯೋಗ ಇಂದು ಸಾಧಾರಣವಾಗಿ ಬಿಟ್ಟಿದೆ. ಡ್ರಗ್ ಅಡಿಕ್ಷನ್ ಅಥವಾ ಅಮಲು ಪದಾರ್ಥಗಳಿಗೆ ದಾಸರಾಗುವುದರಿಂದ ಬದುಕು ಆತಂಕದ ಕೂಪ ದತ್ತ ಸಾಗುತ್ತಿದೆ. 

ಮಾತ್ರವಲ್ಲ ಹಲವಾರು ಮಾನಸಿಕ ದೈಹಿಕ ಸಮಸ್ಯೆಗಳಿಗೆ ಇದು ಕಾರಣವಾಗುತ್ತಿದೆ. ಆ ಮುಖಾಂತರ ಮಾದಕ ವ್ಯೆಸನವು ಇಂದು ಕುಟುಂಬದ, ಸಮಾಜದ ದೊಡ್ಡ ವಿನಾಶವಾಗಿ ಬದಲಾಗಿದೆ. 

ಅಮಲು ಪದಾರ್ಥಗಳ ಅನಿಯಂತ್ರಿತ ಬಳಕೆಯಿಂದ ನರವ್ಯೂಹ ಮತ್ತು ಮಾನಸಿಕ ಸ್ಥಿರತೆಯನ್ನು ತಪ್ಪಿಸಿ ದೈಹಿಕ ಆರೋಗ್ಯಕ್ಕೆ ಪ್ರತಿಕೂಲವಾಗುವ ಒಂದು ಭೀಕರ ರೋಗವಾಗಿದೆ ಡ್ರಗ್ ಅಡಿಕ್ಷನ್ ಎಂದು ವೈದ್ಯಶಾಸ್ತ್ರ ಹೇಳುತ್ತಿದೆ. 

ಮಾದಕ ಪದಾರ್ಥಗಳು ಅತಿ ಹೆಚ್ಚು ಪರಿಣಾಮ ಬೀರುವುದು ಮನುಷ್ಯ ಮೆದುಳಿನ ಮೇಲಾಗಿದೆ. ಮೆದುಳಿಲ್ಲದ ಮನುಷ್ಯನಿಗೆ ಮೌಲ್ಯವಿದೆಯೇ….? 

Cocaine, cannabis, amphetamine, Ecstasy, LSD, MDMA ಇತ್ಯಾದಿಗಳಿಗಿವೇ ಭಾರತದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಅಮಲು ಪದಾರ್ಥಗಳು. ಹದಿಹರೆಯದ ಯುವಕರಲ್ಲಿ ಮಾದಕ ದ್ರವ್ಯಗಳ ಬಳಕೆ ಹೆಚ್ಚುಂದು ಇತ್ತೀಚಿನ ವರದಿಗಳು ಅಂಕಿಅಂಶಗಳು ಸಾಬೀತುಪಡಿಸಿವೆ. ಡ್ರಗ್ಸ್ ಯಾವುದಾದರೂ ಅದರ ಬಳಕೆಯಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರುವುದು ಗ್ಯಾರಂಟಿ. 

ಪದಾರ್ಥಗಳ ಬದಲಾವಣೆ ಸೇವನೆಯ ಪ್ರಮಾಣ ಹೆಚ್ಚುವುದರಿಂದ ಮೆದುಳಿನ ಪರಿಸ್ಥಿತಿಯು ಬೀಕರವಾಗುತ್ತದೆ. ಮೆದುಳು ಮನುಷ್ಯ ಶರೀರದ ಅತ್ಯಂತ ಮುಖ್ಯ ಅಂಗ ಮತ್ತು ಬಹಳ ಮೃದುವಾದ ಭಾಗ ಆದುದರಿಂದಲೇ ನರಗಳ ಮುಖಾಂತರ ಈ ಅಮಲು ಪದಾರ್ಥಗಳು ಒಳಸೇರಿ ಮೆದುಳು ತಲುಪುವಾಗ ಮೆದುಳಿನ ಸಮತೋಲನದಲ್ಲಿ ಏರುಪೇರು ಉಂಟಾಗಿ 

ನೆನಪಿನ ಶಕ್ತಿ ಕುಂದುತ್ತದೆ, ಮಾನಸಿಕ ಒತ್ತಡ, ಚಿಗುಪ್ಸೆ ಕೆಲವೊಮ್ಮೆ ಮೆದುಳಿನ ನಿಷ್ಕ್ರಿಯತೆ ಕೂಡ ಸಂಭವಿಸಿ ಅಪಾಯದ ಮಟ್ಟಕ್ಕೆ ತಲುಪುತ್ತದೆ. 

ಪ್ರತಿಯೊಂದು ಮಾದಕ ದ್ರವ್ಯಗಳು ಕಾನೂನು ಬಾಹಿರವಾಗಿದ್ದರೂ ಅದರ ಉತ್ಪಾದನೆ ಸಾಗಾಟ ಮಾರಾಟ ಉಪಯೋಗ ಇದರಲ್ಲಿ ಯಾವುದೇ ನಿಯಂತ್ರಣ ಆಗುತ್ತಿಲ್ಲ ಎಂಬುದು ನಮ್ಮ ದೇಶದ ಹೀನಾಯ ಪರಿಸ್ಥಿತಿ. ಸಣ್ಣ ಮಕ್ಕಳು ತಿನ್ನುವ ಸಿಹಿ ಮಿಠಾಯಿಯಿಂದ ಹಿಡಿದು ಪೆನ್ಸಿಲ್ ಇರೇಝರ್ ನಂತಹ ಕಲಿಕಾ ಉಪಕರಣಗಳಲ್ಲೂ ಇವತ್ತು ವ್ಯಾಪಕವಾಗಿ ಮಾದಕ ದ್ರವ್ಯಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಮಿಟಾಯಿಯ ಸಿಹಿಯೊಂದಿಗೆ ಅಮಲಿನ ಮತ್ತನ್ನೂ ಅನುಭವಿಸುವ ವಿದ್ಯಾರ್ಥಿ ಮಕ್ಕಳು ನಂತರ ಇದೊಂದು ಚಟವಾಗಿಸಿ ಡ್ರಗ್ಸಿನ ದಾಸರಾಗಿ ಬದಲಾಗುತ್ತಿದ್ದಾರೆ. ಈ ರೀತಿಯ ವಂಚನೆಗಳಿಗೊಳಗಾಗಿ, ಒತ್ತಡಕ್ಕೊಳಗಾಗಿ, ಮಾದಕ ವ್ಯಸನಿಗಳಾದ ಸ್ನೇಹಿತರ ಒಡನಾಟದಿಂದ ಮತ್ತು ಸ್ವಯಂಪ್ರೇರಿತರಾಗಿ ಅಮಲು ಪದಾರ್ಥಗಳಿಗೆ ಬಲಿಯಾಗುವವರೇ ಹೆಚ್ಚು. 

ಮಾದಕ ವ್ಯಸನಿಗಳ‌ ಲಕ್ಷಣಗಳು:

  1. • ಸದಾ ಸಮಯ ಮತ್ತಿನ್ನಿಂದ ಕೂಡಿರುವುದು 
  2. • ಶುಚಿತ್ವ ಇರುವುದಿಲ್ಲ 
  3. • ದಿನಚರಿಯಲ್ಲಿ ಬದಲಾವಣೆ 
  4. • ಗೆಳೆತನದಲ್ಲಿ ಬದಲಾವಣೆ 
  5. • ಹಣದ ಮೇಲೆ ಹೆಚ್ಚು ಆಸಕ್ತಿ 
  6. • ಕನ್ಫ್ಯೂಷನ್ ಅಥವಾ ಗೊಂದಲ 
  7. • ಶರೀರ, ಅಂಗಾಂಗಗಳು ನಡುಗುವಿಕೆ 
  8. • ಮಾತಿನಲ್ಲಿ ತೊದಲುವಿಕೆ 
  9. • ಕೆಲವೊಮ್ಮೆ ನಿದ್ರೆ ಕಡಿಮೆ ಕೆಲವೊಮ್ಮೆ ನಿದ್ರೆ ಅಧಿಕ. 
  10. •ಪರಿಸರ ಪ್ರಜ್ಞೆ ಇಲ್ಲದಿರುವುದು. 
  11. • ಸ್ವಂತ ಶರೀರದ ಮೇಲೆ ಅಥವಾ ಇತರರ ಮೇಲೆ ಅಕ್ರಮ ಎಸಗುವುದು‌. 

ಇದು ಸಾಮಾನ್ಯವಾಗಿ ಒಂದು ಮಾದಕ ವ್ಯಸನಿಯಲ್ಲಿ ಕಂಡುಬರುವ ಲಕ್ಷಣಗಳಾಗಿವೆ. ಇದರೊಂದಿಗೆ ಇನ್ನೂ ಹಲವಾರು ಲಕ್ಷಣಗಳು ಕಂಡು ಬರಬಹುದು. 

ಮಾದಕ ವ್ಯಸನಿಗಳಾಗಿ ಪ್ರಜ್ಞೆ ಇಲ್ಲದೆ ಮಾನಸಿಕ ಸಮತೋಲನವಿಲ್ಲದೆ ಮಾನವೀಯ ಮೌಲ್ಯವಿಲ್ಲದೆ ಕ್ರೂರ ಕಣ್ಣುಗಳಿಂದ ಸಮಾಜವನ್ನು ಕಾಣುವ ಮನುಷ್ಯರನ್ನು ಕೊಂದು ಹಾಕುವ ಒಂದು ಮಾರಕ ಸಮುದಾಯ ಇಲ್ಲಿ ಬೆಳೆದು ಬರುತ್ತಿರುವುದು ಭವಿಷ್ಯದ ಭೀಕರತೆಯನ್ನು ಕೂಗಿ ಹೇಳುತ್ತಿದೆ. ನಿಯಂತ್ರಣ ಬರಬೇಕು ಸಮಾಜ ಮಾದಕ ಮುಕ್ತವಾಗಬೇಕು, ಕಾನೂನು ಕ್ರಮಗಳು ಕೇವಲ ಕೇವಲ ನ್ಯಾಯಾಲಯ, ಪೋಲೀಸ್ ಠಾಣೆಗಳಿಗೆ ಸೀಮಿತವಾಗದೆ ಅಪರಾಧಿಗಳ ವಿರುದ್ಧ ಜಾರಿಗೆ ಬರಬೇಕು. ಉತ್ಪನ್ನ ಮಾರಾಟ ಸಾಗಾಟ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. 

ಹಾಗಾದರೆ ಮಾತ್ರ ಮಾದಕ ವ್ಯಸನಿಗಳನ್ನ ನಿಯಂತ್ರಣಕ್ಕೆ ತರಲು ಸಾಧ್ಯ.  

 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ..!?

ಬಾಲ್ಯದಲ್ಲಿ ಕಲಿತ ಕೆಲ ಚಠಗಳು ಮುಂದೆ ಹಠವಾಗಿ ಪರಿವರ್ತನೆಯಾಗುವುದು. 

2k ಜನರೇಶನ್ ಸಂಪೂರ್ಣ 

ಪರದೆಯ ಮೇಲೆ ಸಮಯ ಕಳೆಯುವವರು. 

ರೀಲ್ಸ್, ಪೋರ್ನ್ ಸೈಟ್, ಡಿಜಿಟಲ್ ಗೇಮ್ಸ್, ಟಾಕ್ಸಿಕ್ ಸಿನಿಮಾಗಳು ಇತ್ಯಾದಿಗಳಲ್ಲಿ ತಮ್ಮ ಸಮಯವನ್ನು ಮೀಸಲಿಟ್ಟು ಅವುಗಳ ಕೆಟ್ಟ ಪ್ರಭಾವದಿಂದ ನವ ತಲೆಮಾರಿನ ವಿದ್ಯಾರ್ಥಿಗಳು ಯುವ ಪೀಳಿಗೆ ಬಲುಬೇಗ ಮಾದಕ ವ್ಯಸನಿಗಳಾಗಿ ಮಾರ್ಪಾಡು ಹೊಂದುತ್ತಿರುವರು. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಯುವಕರು ಮಾನಸಿಕ ನೆಮ್ಮದಿ, ದೈಹಿಕ ವ್ಯಾಯಾಮ ಸಿಗುವಂತಹ ಮನರಂಜನೆಗಳಲ್ಲಿ ಕ್ರೀಡೆಗಳಲ್ಲಿ ತೊಡಗುವ ಒಂದು ಕಾಲವಿತ್ತು. ಅದರಲ್ಲೇ ತಲ್ಲೀನರಾಗುವಾಗ ಇತರ ಕೆಡುಕುಗಳತ್ತ ಮನಸು ಗಮನ ಸೆಳೆಯುವುದು ಕಡಿಮೆ. ಸದಾ ಸಮಯ ಮೌನವಾಗಿ ಒಬ್ಬಂಟಿಯಾಗಿ ಮೊಬೈಲ್, ಟ್ಯಾಬ್ ಅಥವಾ ಕಂಪ್ಯೂಟರ್ ಗಳ ಪರದೆ ಮೇಲೆ ಕಾಲಹರಣ ಮಾಡುವಾಗ ಕೆಡುಕಿನ ಬಲೆಗೆ ಸಿಲುಕಿಕೊಳ್ಳುವುದು ಸಹಜ. 

ವಿದ್ಯಾರ್ಥಿಗಳು ಸದಾ ಸಮಯ ಶಿಕ್ಷಣದಲ್ಲೂ ಕ್ರೀಡೆಯಲ್ಲೂ ಆರೋಗ್ಯಕರ ಮನರಂಜನೆಗಳಲ್ಲಿ ತೊಡಗಿಕೊಳ್ಳಬೇಕು. 

ಬದುಕನ್ನು ಆನಂದಮಯವಾಗಿಸುವುದು. ಮಾನಸಿಕ ಸಮಸ್ಯೆಗೆ ಸೂಕ್ತ ಸಮಾಲೋಚನಾ ಪರಿಹಾರವನ್ನು ಕಂಡುಕೊಳ್ಳುವುದು. ಸಮವಯಸ್ಕರೊಂದಿಗೆ ಅನುವದನೀಯ ವಿನೋದಗಳಲ್ಲಿ ಏರ್ಪಡುವುದು ಈ ರೀತಿಯ ಚಟಗಳು ರೂಡಿಯಾಗಿಸುವುದರಿಂದ ಒಂದು ಹಂತದವರೆಗೆ ಮಾದಕಕ್ಕೆ ಮಾರು ಹೋಗುವುದನ್ನು ಸ್ವಯಂ ನಿಯಂತ್ರಣಕ್ಕೆ ತರಬಹುದು. 

ಅದಕ್ಕೆ ಪೂರಕವಾಗುವ ವಾತಾವರಣವನ್ನು ಪೋಷಕರು ಶಿಕ್ಷಕರು ನಿರ್ಮಾಣ ಮಾಡಿಕೊಡಬೇಕು. ಶಾಲಾ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಗಳು ಇದರ ಕಾರ್ಯ ಪ್ರವೃತ್ತಿ ಫಲಪ್ರದವಾಗುವಂತೆ ಕಾರ್ಯಚರಿಸಬೇಕು. ಸಮಾಜ ಅದಕ್ಕಾಗಿ ಪಣತೊಡಬೇಕು.

ಇನ್ನು ಮಾದಕ ದ್ರವ್ಯ ಸೇವನೆಯ ಧಾರ್ಮಿಕ ವಿಧಿ ಪರಿಶೀಲಿಸಿದಾಗಲೂ: ಇಸ್ಲಾಮಿನಲ್ಲಿ ಮಾದಕ ವ್ಯಸನವು ಅತ್ಯಂತ ಕಠಿಣವಾಗಿ ನಿಷೇಧಿಸಲಾಗಿದೆ. ಮದ್ಯ, ಗಾಂಜಾ, ಹೆರೋಯಿನ್, ಕೊಕೈನ್ ಮುಂತಾದ ಬುದ್ಧಿಯನ್ನು ಮಂಕುಮಾಡುವ ಎಲ್ಲ ಪದಾರ್ಥಗಳು ಹರಾಂ ಎಂದು ಪರಿಗಣಿಸಲಾಗಿದೆ. ಖುರಾನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: “ಹೇ ವಿಶ್ವಾಸಿಗಳೇ! ಮದ್ಯ, ಜೂಜಾಟ, ಬಲಿ ಗಲ್ಲುಗಳು ಮತ್ತು ಭವಿಷ್ಯ ಹೇಳುವ ಬಾಣಗಳು — ಇವು ಶೈತಾನದ ಅಶುದ್ಧ ಕೆಲಸಗಳಾಗಿವೆ. ಇವುಗಳಿಂದ ದೂರವಿರಿ, ನೀವು ಯಶಸ್ವಿಯಾಗುವಿರಿ” (ಸೂರಾ ಅಲ್-ಮಾಯಿದಾ 5:90).

ಹದೀಸಿನ ಪ್ರಕಾರ, “ಬಹಳ ಪ್ರಮಾಣದಲ್ಲಿ ಮತ್ತಾಗಿಸುವ ಯಾವುದೇ ಪದಾರ್ಥ — ಅದರ ಸ್ವಲ್ಪ ಪ್ರಮಾಣವೂ ಹರಾಂ” (ಸಹೀಹ್ ಬುಖಾರಿ, ಸಹೀಹ್ ಮುಸ್ಲಿಂ). ಇದರಿಂದ ಸ್ಪಷ್ಟವಾಗುತ್ತದೆ, ಡ್ರಗ್ಸ್‌ನ್ನು ‘ಕೇವಲ ಸ್ವಲ್ಪ’ ತೆಗೆದುಕೊಳ್ಳುವುದೂ ಪಾಪವೇ ಆಗಿದೆ.

ಇಸ್ಲಾಮಿನಲ್ಲಿ ಮಾದಕ ವ್ಯಸನವನ್ನು ನಿಷೇಧಿಸಿರುವ ಕಾರಣಗಳು ಸ್ಪಷ್ಟ — ಅದು ಬುದ್ಧಿ, ಆರೋಗ್ಯ, ಆಸ್ತಿ ಮತ್ತು ಸಮಾಜಕ್ಕೆ ಹಾನಿ ಮಾಡುತ್ತದೆ. ವ್ಯಸನವು ಅಪರಾಧ, ಜಗಳ, ಕುಟುಂಬಗಳ ನಾಶ ಮತ್ತು ಆರ್ಥಿಕ ಹಾನಿಗೆ ಕಾರಣವಾಗುತ್ತದೆ. ಅಲ್ಲಾಹನು ನಮಗೆ ಬುದ್ಧಿ ಮತ್ತು ದೇಹವನ್ನು ಅಮಾನತಾಗಿ ನೀಡಿದ್ದಾನೆ; ಅದನ್ನು ಹಾನಿಗೊಳಿಸುವುದು ಪಾಪ.

ಶರೀಯತ್ ಪ್ರಕಾರ, ವ್ಯಸನಿಯಾಗಿರುವ ವ್ಯಕ್ತಿ ಪಶ್ಚಾತ್ತಾಪಿಸಬೇಕು, ಚಿಕಿತ್ಸೆ ಪಡೆಯಬೇಕು. ಮಾದಕ ವಸ್ತುಗಳ ಮಾರಾಟ, ವಿತರಣೆ, ಅಥವಾ ಸಾಗಾಣಿಕೆ ಎಲ್ಲವೂ ಹರಾಂ. ಎಂದು ಇಸ್ಲಾಂ ಬಹಳ ಸ್ಪಷ್ಟವಾಗಿ ತಿಳಿ ಹೇಳಿದೆ. 

Prevention is better than cure ಎಂಬ ನಾನ್ನುಡಿಯಂತೆ ರೋಗ ಬಂದು ಚಿಕಿತ್ಸೆ ಹುಡುಕುವುದಕ್ಕಿಂತ ರೋಗ ಬಾರದ ಹಾಗೆ ಮುಂಜಾಗ್ರತೆ ವಹಿಸುವುದು ಉತ್ತಮ.  

ಜೀವನವು ಸೃಷ್ಟಿಕರ್ತ ದಯಪಾಲಿಸಿದ ಒಂದು ಅಮೂಲ್ಯ ಕೊಡುಗೆ. ಅದನ್ನು ಮಾದಕ ವಸ್ತುಗಳ ಕೈಗೆ ಒಪ್ಪಿಸುವುದೆಂದರೆ, ಸುಂದರವಾದ ತೋಟವನ್ನು ಬೆಂಕಿಗೆ ನೀಡಿದಂತಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಬದುಕಿನ ತೋಟವನ್ನು ಕಾಪಾಡಿಕೊಳ್ಳಬೇಕು; ಹೂವುಗಳ ಸುಗಂಧವನ್ನು ಬದುಕಿನಲ್ಲಿ ಹರಡಬೇಕು — ವಿಷದ ವಾಸನೆಗೆ ಅವಕಾಶ ಕೊಡಬಾರದು.

ಬರಹ: ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ 

m

Related Posts