Featured, ಅಂಕಣ, ಸ್ಥಳೀಯ

ನಮ್ಮ ನಾಡು ಚುನಾವಣೆಗೆ ಸಜ್ಜಾಗುತ್ತಿದೆ. ಹಕ್ಕನ್ನು ಚಲಾಯಿಸಲು ಮತದಾರರು ತಯಾರಾಗಿರಿ…!!

ನಮ್ಮ ನಾಡು ಮತ್ತೊಂದು ಪ್ರಜಾಪ್ರಭುತ್ವದ ಹಬ್ಬಕ್ಕೆ ಸಜ್ಜಾಗುತ್ತಿದೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ ಸದ್ದು ಕೇಳಿಬರುತ್ತಿದೆ. ಭಾರತದಂತಹ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ 18 ವರ್ಷ ಪೂರ್ತಿಗೊಂಡ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಅತ್ಯಂತ ದೊಡ್ಡ ಶಕ್ತಿ ಎಂದರೆ ಅದು ‘ಮತದಾನದ ಹಕ್ಕು’. ಆದರೆ, ಈ ಹಕ್ಕನ್ನು ಚಲಾಯಿಸುವ ಸಮಯದಲ್ಲಿ ನಾವು ಎಷ್ಟು ಜಾಗರೂಕರಾಗಿದ್ದೇವೆ ಎಂಬುದು ಇಂದಿನ ಪ್ರಶ್ನೆ.

ಸಾಮಾನ್ಯವಾಗಿ ಚುನಾವಣೆ ಘೋಷಣೆಯಾದ ನಂತರವಷ್ಟೇ ನಾವು ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಲು ಮುಂದಾಗುತ್ತೇವೆ. ಹೆಸರು ಇಲ್ಲದಿದ್ದಾಗ ಅಥವಾ ತಪ್ಪುಗಳಿದ್ದಾಗ ಸರ್ಕಾರವನ್ನು ದೂಷಿಸುತ್ತೇವೆ. ಆದರೆ ಸರ್ಕಾರವು ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಭಾವಚಿತ್ರ ಅಳವಡಿಕೆ, (SIR ನೀತಿ), ಹೆಸರು-ವಿಳಾಸ ಸರಿಪಡಿಸುವಿಕೆಗೆ ಮುಂಚಿತವಾಗಿಯೇ ಅವಕಾಶ ನೀಡಿದ್ದರೂ, ನಾವು ಎಚ್ಚೆತ್ತುಕೊಳ್ಳದಿರುವುದು ವಿಷಾದನೀಯ. ನಿಯಮಗಳನ್ನು ಪಾಲಿಸದೆ ಕೊನೆಯ ಕ್ಷಣದಲ್ಲಿ ಹಕ್ಕು ಚಲಾಯಿಸಲು ಪರದಾಡುವುದು ನಮ್ಮದೇ ಬೇಜವಾಬ್ದಾರಿತನವಾಗುತ್ತದೆ.

ಜವಾಬ್ದಾರಿಯುತ ಬಿ.ಎಲ್.ಒ ಮತ್ತು ಬಿ.ಎಲ್.ಎ ಗಳು ಪ್ರತಿ ವಾರ್ಡ್‌ಗಳಲ್ಲಿ ಇದೆ.ಮತದಾರರ ನೆರವಿಗೆ ಸರ್ಕಾರ ಬಿ.ಎಲ್.ಓ (Booth Level Officer) ಗಳನ್ನು ನೇಮಿಸಿದೆ. ಅದೇ ರೀತಿ ರಾಜಕೀಯ ಪಕ್ಷಗಳು ಕೂಡ ಬಿ.ಎಲ್.ಎ (Booth Level Agent) ಗಳನ್ನು ಹಾಗೂ ವಾರ್ಡ್ ಅಧ್ಯಕ್ಷರನ್ನು ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಜವಾಬ್ದಾರಿಯನ್ನು ನೀಡಿದೆ.

• ಕೆಲವು ಕಡೆ ಅಧಿಕಾರಿಗಳ ಮಾಹಿತಿ ಕೊರತೆಯಿಂದ ಕೆಲಸಕುಂಠಿತವಾಗಿರಬಹುದು

• ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಿ, ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. 

• ಹೆಸರಿಗೆ ಮಾತ್ರ ಪದನಾಮ ಇಟ್ಟುಕೊಳ್ಳದೆ, ಪ್ರತಿಯೊಬ್ಬ ಮತದಾರನನ್ನೂ ತಲುಪಿ ಪಟ್ಟಿಯನ್ನು ಸಮರ್ಪಕಗೊಳಿಸುವ ಜವಾಬ್ದಾರಿ ಇವರ ಮೇಲಿದೆ.

 ಸರಕಾರ ಹೊಸ ನೀತಿಗಳನ್ನು ತಂದಾಗ ಸಾಮಾನ್ಯವಾಗಿ ಜನರು ಕೇವಲ ಟೀಕೆ ಮಾಡುವುದರಲ್ಲಿ ಕಾಲಹರಣ ಮಾಡುತ್ತಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡಿಸಲು ನೀಡಿದ ಸಮಯ ಮುಗಿದ ಮೇಲೆ ಗೋಳಾಡುವುದರಲ್ಲಿ ಅರ್ಥವಿಲ್ಲ. ನಿಮ್ಮ ಒಂದು ಮತ ನಿಮ್ಮ ನೆಚ್ಚಿನ ಅಭ್ಯರ್ಥಿ ಅಥವಾ ಪಕ್ಷದ ಗೆಲುವಿಗೆ ನಿರ್ಣಾಯಕ. ಇದರೊಂದಿಗೆ, ನಮ್ಮ ಪ್ರದೇಶದ ಅಭಿವೃದ್ಧಿಗಾಗಿ ಸೂಕ್ತ ನಾಯಕನನ್ನು ಆರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಿಮ್ಮ ಕುಟುಂಬದ ಪ್ರತಿಯೊಬ್ಬರ ಹೆಸರೂ ಪಟ್ಟಿಯಲ್ಲಿದೆಯೇ ಎಂದು ಇಂದೇ ಖಚಿತಪಡಿಸಿಕೊಳ್ಳಿ.

ನಮ್ಮದೊಂದು ಮನವಿ

ನಿಮ್ಮ ಹತ್ತಿರದ ಬಿ.ಎಲ್.ಒ ಅಥವಾ ಬಿ.ಎಲ್.ಎ ಗಳನ್ನು ತಕ್ಷಣ ಸಂಪರ್ಕಿಸಿ. ನಿಮ್ಮ ಭಾವಚಿತ್ರದ ಅಪ್‌ಡೇಟ್, (SIR) ಹಾಗೂ ಇತರ ತಾಂತ್ರಿಕ ದೋಷಗಳನ್ನು ಸರಿಪಡಿಸುವಿಕೆಗಳನ್ನು ಈಗಲೇ ಪೂರೈಸಿ. ಕೊನೆಯ ಕ್ಷಣದ ಗೊಂದಲದಿಂದ ದೂರವಿರಿ ಮತ್ತು ನಿಮ್ಮ ಪವಿತ್ರವಾದ ಮತದಾನದ ಹಕ್ಕನ್ನು ಕಾಯ್ದಿರಿಸಿಕೊಳ್ಳಿ. *ನೆನಪಿಡಿ*: ಜಾಗೃತ ಮತದಾರನೇ ಪ್ರಜಾಪ್ರಭುತ್ವದ ಅಡಿಪಾಯ.ಈ ಹಿನ್ನೆಲೆಯಲ್ಲಿ ಸರ್ವರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಿ ತನ್ನ ಹಕ್ಕನ್ನು ಚಲಾಯಿಸಲು ಮುಂದಾಗಬೇಕಾಗಿದೆ ಎಂಬುದೇ ನಮ್ಮ ಆಶಯ.

ಬರಹ:- ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು

Related Posts