Featured, ಇತರೆ, ಸ್ಥಳೀಯ

ಹೆಣ್ಣು ಸುರಕ್ಷಿತಳಾಗೋದು ಯಾವಾಗ ?

ದಿನಂಪ್ರತಿ ಕೇಳಿ ಬರುತ್ತಿರುವ ಅತ್ಯಾಚಾರ ಪ್ರಕರಣಗಳು, ಒಂದಕ್ಕಿಂತಲೂ ಒಂದು ಭೀಕರವೆನಿಸಿ ಕ್ಷಣಕ್ಷಣಕ್ಕೂ ಸ್ತ್ರೀ ಸಮೂಹವನ್ನು ಅಭದ್ರತೆಯ ವಾತಾವರಣದಲ್ಲಿ ಬದುಕುವಂತೆ ಮಾಡುತ್ತಿದೆ.

ಯಾವುದೇ ಕ್ಷಣದಲ್ಲೂ , ಯಾವುದೇ ಸ್ಥಳದಲ್ಲೂ , ಮನುಷ್ಯ ರೂಪದ ರಾಕ್ಷಸರು, ಮೈಮೇಲೆ ಎರಗಬಹುದೆಂಬ, ಭೀತಿಯ ಸನ್ನಿವೇಶಗಳು ಅಧಿಕಗೊಳ್ಳುತ್ತಿದೆ. ಇತ್ತೀಚಿಗಷ್ಟೆ ರಾಜಸ್ಥಾನದಲ್ಲಿ ಹದಿಮೂರರ ಹರೆಯದ ಬಾಲಕಿಯ ಮೇಲೆ ಮೂವತ್ತೆರಡು ಮಂದಿ ದುರುಳರು, ಅಮಾನವೀಯವಾಗಿ ಅತ್ಯಾಚಾರವೆಸಗಿ , ಕೆಲ ದಿನಗಳ ನಂತರ ಆ ಹುಡುಗಿ ಸಾವನ್ನಪ್ಪಿದ ಘಟನೆ ನಡೆದಿತ್ತು . ಸಾವು ಬದುಕಿನ ನಡುವಿನ ಸಂಘರ್ಷದ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದಾಗ ವೈರಲ್‌ ಆಗುತ್ತಿದ್ದ ವೀಡಿಯೋ ಒಂದು ಎಂತಹ ಕಲ್ಲು ಹ್ರದಯವನ್ನೂ ಕರಗಿಸುವಂತಿತ್ತು . 

ಆದರೆ ಯಾವುದೇ ಬರಹ ಭಾಷಣಗಳು ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕೆಂಬ ಸಾಮಾಜಿಕ ಬದ್ದತೆಯ ಭಾಗವಾಗಿ ಪ್ರಕಟಗೊಳ್ಳುತ್ತಿದೆಯೇ ಹೊರತು ಇದರಿಂದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲದಂತ ಒಂದು ಸಮಾಜದಲ್ಲಾಗಿದೆ ನಾವಿಂದು ಜೀವಿಸುತ್ತಿರುವುದು .

ಜಾರ್ಖಂಡ್‌ನಲ್ಲಿ ನಡೆದ ಮತ್ತೊಂದು ಘಟನೆ ನಾಗರಿಕ ಸಮಾಜದ ಹೀನಾಯ ಮನಸ್ಥಿತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ .

ಮಹಿಳೆಯರು ಮತ್ತು ಬಾಲಕಿಯರ ಘನತೆ, ಸುರಕ್ಷತೆ ಹಾಗೂ ಮಾನವೀಯತೆಗೆ ಈ ಸಮಾಜ ಎಷ್ಟು ಪ್ರಾಮುಖ್ಯತೆ ನೀಡುತ್ತಿದೆ ಎಂಬ ಪ್ರಶ್ನೆ ಮತ್ತಷ್ಟು ತೀವ್ರವಾಗಿ ಕಾಡುತ್ತಿದೆ.

ಜಾರ್ಖಂಡ್‌ನಲ್ಲಿ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ನರ ಸತ್ತ ಮನುಷ್ಯನೋರ್ವ ಅತ್ಯಾಚಾರವೆಸಗಿದಾಗ , ಈ ಪ್ರಕರಣವನ್ನು ನ್ಯಾಯಯುತವಾಗಿ ಎದುರಿಸಬೇಕಾದ ಅಲ್ಲಿನ ಪಂಚಾಯತ್ ಸದಸ್ಯರು ಅದನ್ನು ಸ್ಥಳೀಯ ಮಟ್ಟದಲ್ಲೇ ಮುಚ್ಚಿಹಾಕಲು ಆರೋಪಿಗೆ 1 ಲಕ್ಷ ದಂಡ ವಿಧಿಸಿ ಆ ಹಣದಿಂದ ಔತಣಕೂಟವನ್ನು ಏರ್ಪಡಿಸಿದ್ದು ಸಮಾಜದ ನ್ಯಾಯಪ್ರಜ್ಞೆ ಮತ್ತು ಮಾನವೀಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ.

ಒಂದು ಪುಟ್ಟ ಮಗುವಿನ ನೋವು, ಅದರ ಭವಿಷ್ಯ ಮತ್ತು ನ್ಯಾಯಕ್ಕಿಂತ ಹಣಕ್ಕೆ ಹೆಚ್ಚಿನ ಮೌಲ್ಯ ನೀಡುವ ಮನೋಭಾವ ಸಮಾಜಕ್ಕೆ ಅತ್ಯಂತ ಅಪಾಯಕಾರಿಯಲ್ಲವೇ .

ಮಗುವಿನ ಸ್ಥಾನದಲ್ಲಿ ತಮ್ಮ ಮಗುವಿದ್ದರೆ, ತಮ್ಮ ತಂಗಿಯಿದ್ದರೆ, ತಮ್ಮ ಪತ್ನಿಯಿದ್ದರೆ ಎಂಬ ಒಂದು ಕ್ಷಣದ ಆಲೋಚನೆಯಾದರೂ ಇಂತಹ ಅಪರಾಧ ಎಸಗುವವರಿಗೂ, ಅಪರಾಧವನ್ನು ಮುಚ್ಚಿಹಾಕಲು ಯತ್ನಿಸುವವರಿಗೂ ಮೂಡಬಾರದೇ ? 

ಯಾಕೆ ಹೀಗೆ ?  

ಇಂತಹ ಹೀನಾಯ ಕೃತ್ಯಗಳ ನಿರ್ಮೂಲನೆ ಯಾವಾಗ? ಇಲ್ಲಿ ಹೆಣ್ಣು ಸುರಕ್ಷಿತಳಾಗೋದು ಯಾವಾಗ ? 

ಈ ದೇಶದಲ್ಲಿ ಪ್ರತಿ ಒಂದು ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆಯಾದರೆ ಈ ಸಮಾಜ , ಆಡಳಿತ ವ್ಯವಸ್ಥೆ ಯಾಕೆ ಇದನ್ನು ಅತ್ಯುನ್ನತ ಆದ್ಯತೆಯ ಸಮಸ್ಯೆಯಾಗಿ ಪರಿಗಣಿಸುತ್ತಿಲ್ಲ ?  

 ಪ್ರತಿಯೊಬ್ಬ ಸಂವೇದನಾಶೀಲ ನಾಗರಿಕನ ಮನಸ್ಸನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾದರೂ ಎಲ್ಲಿಂದ ? 

ಸಂತ್ರಸ್ತ ಹೆಣ್ಣು ಮಕ್ಕಳ ಕಣ್ಣೀರಿಗೆ ನ್ಯಾಯ ಒದಗಿಸಲು ವಿಫಲವಾಗುತ್ತಿರುವ ನ್ಯಾಯ ವ್ಯವಸ್ಥೆಯನ್ನು ನೋಡುವಾಗ ನಮ್ಮ ದೇಶದಲ್ಲಿ ಯಾಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯು ಚಾಲ್ತಿಯಲ್ಲಿದೆಯೋ ಎಂಬ ಪ್ರಶ್ನೆಯೂ ಸಹಜವಾಗಿಯೇ ಉದ್ಭವಿಸುತ್ತಿದೆ . ಅರಬ್ ರಾಷ್ಟ್ರಗಳಂತೆ ಇಲ್ಲೂ ಕೂಡ ಅತ್ಯಾಚಾರಿಗಳಿಗೆ ತ್ವರಿತ ಗತಿಯಲ್ಲಿ ಮರಣದಂಡನೆಗಳು ಪ್ರಾಪ್ತಿಯಾದಲ್ಲಿ ಸ್ತ್ರೀ ಸಮೂಹವು ಇಂದು ನಿರ್ಭೀತಿಯಿಂದ ನಡೆದಾಡಬಹುದಿತ್ತು. 

ಸಂತ್ರಸ್ತೆಯರು ಅನುಭವಿಸುವುದು ಕೇವಲ ದೈಹಿಕ ನೋವಲ್ಲ. ಮಾನಸಿಕ ಆಘಾತ, ಆತ್ಮಗೌರವಕ್ಕೆ ಆಗುವ ಧಕ್ಕೆ, ಸಮಾಜದ ತಿರಸ್ಕಾರ, ಭವಿಷ್ಯದ ಬಗ್ಗೆ ಮೂಡುವ ಅನಿಶ್ಚಿತತೆ—ಇವೆಲ್ಲವೂ ಅವರನ್ನು ದೀರ್ಘಕಾಲ ಕಾಡುತ್ತವೆ. 

ಆರೋಪಿಯು ಅನುಭವಿಸುವ ಯಾವುದೇ ಶಿಕ್ಷೆ ಅವರ ನೋವನ್ನು ಸಂಪೂರ್ಣವಾಗಿ ಪರಿಹರಿಸಲಾರದು. ಆದ್ದರಿಂದ ಇಂತಹ ಅಪರಾಧಗಳು ನಡೆಯದಂತೆ ತಡೆಯುವ ಸಮಾಜದ ನಿರ್ಮಾಣವೇ ಮೊದಲ ಆದ್ಯತೆಯಾಗಬೇಕು. ಆದರೆ ಸಂತ್ರಸ್ತೆಯರ ನೋವನ್ನು ಅರ್ಥಮಾಡಿಕೊಳ್ಳದ ,

ಅತ್ಯಾಚಾರ ಆರೋಪಿಗಳನ್ನು ರಕ್ಷಿಸುವ, ಅವರಿಗೆ ಹೂಹಾರ ಹಾಕಿ ಸನ್ಮಾನಿಸುವ ಮನಸ್ಥಿತಿಗಳು ಪ್ರಭುತ್ವದ ಭಾಗವಾಗಿರುವವರೆಗೂ ಇಂತದ್ದೊಂದು ಕ್ರಾಂತಿಯನ್ನು ನಿರೀಕ್ಷಿಸಲು ಸಾಧ್ಯವೇ ?

ಲೇಖಕಿ:-  ಫಾತಿಮಾ ನುಸೈಬಾ , ಕಲ್ಲಡ್ಕ 

m

Related Posts