ವಿಶ್ವ ರಕ್ತದಾನಿಗಳ ದಿನ ರಕ್ತದಾನಿಯ ಪಾಲಿಗೆ ಒಲಿದು ಬಂದ ಪುರಸ್ಕಾರ
ವಯಸ್ಸಿನ್ನೂ ನಲ್ವತ್ತರ ಆಸುಪಾಸು.ಆದರೆ, ರಕ್ತದಾನ ಮಾಡಿದ್ದು ಬರೋಬ್ಬರಿ 65 ಬಾರಿ!
ಕಾರ್ಯಕ್ರಮವೊಂದರಲ್ಲಿ ಜಿ.ಎಂ ಉಸ್ತಾದರ ರಕ್ತದಾನ ಮಾಡುವ ಕುರಿತಾದ ಪ್ರೋತ್ಸಾಹದ ಮಾತಿನಿಂದ ಪ್ರೇರಣೆಗೊಂಡು ರಕ್ತದಾನ ಮಾಡಲು ಪ್ರಾರಂಭಿಸಿದ ಕರೀಂ ಕದ್ಕಾರ್ ನಂತರ ನಿರಂತರವಾಗಿ ರಕ್ತದಾನ ಮಾಡುತ್ತಾ , ಇನ್ನೊಬ್ಬರನ್ನು ಮಾಡಿಸುತ್ತಾ, ನೂರಾರು ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತಾ ಸಾವಿರಾರು ಜೀವಗಳ ಪಾಲಿಗೆ ಆಪತ್ಪಾಂಧವನಾಗಿ ಗುರುತಿಸಿಕೊಂಡಿದ್ದಾರೆ.
” ನಡೆದಾಡುವ ಬ್ಲಡ್ ಬ್ಯಾಂಕ್ ” ಎಂದೇ ಹೆಸರುವಾಸಿಯಾದ ಕರೀಂ ಅದ್ಯಾವುದೇ ಆಸ್ಪತ್ರೆಯಲ್ಲಿದ್ದ ರೋಗಿಗೆ ತುರ್ತಾಗಿ ರಕ್ತ ಬೇಕೆಂದರೆ ರಕ್ತದ ಪೂರೈಕೆ ವ್ಯವಸ್ಥೆ ಮಾಡಿಕೊಡುವಲ್ಲೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ತಾನು ರಕ್ತದಾನ ಮಾಡುತ್ತಾ, ಇನ್ನೊಬ್ಬರನ್ನು ರಕ್ತದಾನ ಮಾಡಿಸುವಲ್ಲೂ ಯಶಸ್ವಿಯಾಗಿರುವ ಕರೀಂ ಕದ್ಕಾರ್ ರವರ ಮಾನವೀಯ ಸೇವೆಯನ್ನು ಪರಿಗಣಿಸಿ ಈಗಾಗಲೇ ಹಲವು ಸಂಘ, ಸಂಸ್ಥೆಗಳು ಗುರುತಿಸಿಕೊಂಡಿದೆ.
ಜೂನ್ 14 ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಂಗಳೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕರೀಂ ಕದ್ಕಾರ್ ರವರನ್ನು ಸನ್ಮಾನಿಸಿ ಗೌರವಿಸಿದೆ.ಅವರ ಮಾನವೀಯ ಸಾಮಾಜಿಕ ಸೇವೆಗೆ ಲಭಿಸಿದ ಅಧಿಕೃತ ಗೌರವವೂ ಆಗಿರುತ್ತದೆ.
ಜಿಲ್ಲೆಯಾದ್ಯಂತ ಓಡಾಡಿ ರೋಗಿಗಳಿಗೆ ಸಕಾಲದಲ್ಲಿ ರಕ್ತದ ಪುರೈಕೆ ವ್ಯವಸ್ಥೆಯನ್ನು ಮಾಡಿಕೊಡುತ್ತಾ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸನ್ಮಿತ್ರ ಕರೀಂ ಕದ್ಕಾರ್ ರವರನ್ನು ಅರಸುತ್ತಾ ಇನ್ನಷ್ಟು ಪ್ರಶಸ್ತಿಗಳು ಬರುವಂತಾಗಲಿ, ಎಲ್ಲಾ ವಿಧದ ಶುಭ ಹಾರೈಕೆಗಳು.
ಬರಹ-ಸ್ನೇಹಜೀವಿ ಅಡ್ಕ






m
