ಧರ್ಮಸ್ಥಳ ಗ್ರಾಮದಲ್ಲಿ ಹಲವು ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಶವಗಳ ಪತ್ತೆಯ ಪ್ರಕರಣದಲ್ಲಿ ಈಗ ಮಹತ್ವದ ತಿರುವು ಕಂಡಿದೆ. ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (S.I.T) ರಚಿಸುವಂತೆ ಆದೇಶ ಹೊರಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ಎಸ್‌ಐಟಿ ತಂಡದಲ್ಲಿ ಐಪಿಎಸ್ ಅಧಿಕಾರಿ ಅನುಚೇತ್, ಜಿತೇಂದ್ರ ಕುಮಾರ್, ಸೌಮ್ಯಲತಾ ಇರಲಿದ್ದಾರೆ. ಈ ಹೊಸ ತಂಡವು ಪ್ರಕರಣದ ಸಮಗ್ರ ತನಿಖೆ ನಡೆಸಿ, ಸತ್ಯ ಬಯಲಾಗಿಸಲು ಹಾಗೂ ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ನಿಯೋಜಿಸಲಾಗಿದೆ. ಸರ್ಕಾರದ ಈ ನಿರ್ಧಾರವು ಪ್ರಕರಣಕ್ಕೆ ಗಂಭೀರತೆ ನೀಡಿದಂತಾಗಿದೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾ ಎಸ್.ಪಿ ಡಾ. ಅರುಣ್ ಕೆ., ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರವು ಅದೇಶಿಸಿರುವುದರಿಂದ ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.




m
