ಪುತ್ತೂರು ತಾಲೂಕಿನ ಪರ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಶಾಲಾ ಮಕ್ಕಳೊಂದಿಗೆ ಸರತಿಯಲ್ಲಿ ಕುಳಿತು ಬಿಸಿಯೂಟ ಸೇವಿಸಿದರು.
ಬಿಸಿಯೂಟದ ಗುಣಮಟ್ಟ ಹಾಗೂ ವ್ಯವಸ್ಥೆಯ ಕುರಿತು ಸ್ಥಳದಲ್ಲೇ ಪರಿಶೀಲನೆ ನಡೆಸಿದ ಅವರು, ನೇರವಾಗಿ ಮಕ್ಕಳೊಂದಿಗೆ ಸಂವಾದ ನಡೆಸಿದರು. “ದಿನದಿನವೂ ಊಟ ಚೆನ್ನಾಗಿರುತ್ತದೆಯಾ? ಸಮಯಕ್ಕೆ ಸರಿಯಾಗಿ ಕೊಡ್ತಾರಾ? ಮೊಟ್ಟೆ ನೀಡುತ್ತಾರೆವಾ?” ಎಂಬ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿ ಅವರಿಂದ ನೇರ ಉತ್ತರ ಪಡೆದರು.
ಬಳಿಕ ಮಾತನಾಡಿದ ಶಾಸಕರು, “ಸರಕಾರ ಪ್ರತಿಯೊಂದು ಶಾಲೆಯಲ್ಲಿ ಪೌಷ್ಠಿಕಾಂಶಯುಕ್ತ ಬಿಸಿಯೂಟದ ವ್ಯವಸ್ಥೆ ಮಾಡಿದ್ದು, ಮಕ್ಕಳ ಆರೋಗ್ಯವರ್ಧನೆಯು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆ ಸೇರಿದಂತೆ ಸಮತೋಲನ ಆಹಾರ ದೊರಕಬೇಕು. ಈ ಸವಲತ್ತು ಎಲ್ಲ ಶಾಲೆಗಳಿಗೂ ತಲುಪುವುದು ಖಚಿತ, ಆದರೆ ಅದರ ಅನುಷ್ಠಾನ ಸೂಕ್ತವಾಗಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸುವುದು ನನ್ನ ಕರ್ತವ್ಯ,” ಎಂದು ಹೇಳಿದರು.
ಮೆಣಸಿನ ಹುಡಿ ಬಳಕೆ ಕುರಿತು ನಿರ್ದೇಶನ:
“ರೆಡಿಮೇಡ್ ಸಾಂಬಾರ್ ಪೌಡರ್ ಅಥವಾ ಮೆಣಸಿನ ಪುಡಿಯ ಬಳಕೆ ಬದಲಿಗೆ, ತಾಜಾ ಮೆಣಸು ಅರೆದು ಅಥವಾ ಕೊಚ್ಚಿ ಬಳಸುವಂತೆ ಈಗಾಗಲೇ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಪರ್ಲಡ್ಕ ಶಾಲೆಯಲ್ಲಿ ಈ ನಿಯಮ ಪಾಲನೆಯಾಗಿದೆ ಎಂಬುದು ಸಂತಸದ ಸಂಗತಿ. ಜೊತೆಗೆ, ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಿಸಿಯೂಟ ನೀಡುವಂತೆ ಪುನಃ ಸೂಚನೆ ನೀಡಿದ್ದೇನೆ,” ಎಂದು ಶಾಸಕರು ವಿವರಿಸಿದರು.
ಶಾಲೆಯ ಭೇಟಿ ಸಂದರ್ಭದಲ್ಲಿ ಪಡೆದ ಅನುಭವದ ಬಗ್ಗೆ ಅವರು, “ಇಂದು ನಾನು ಈ ಶಾಲೆಯಲ್ಲಿ ಊಟ ಮಾಡಿದ್ದು, ಅದು ರುಚಿಕರವಾಗಿತ್ತು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇತರ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ ವಿದ್ಯಾರ್ಥಿ ಹಾಸ್ಟೆಲ್‌ಗಳಿಗೂ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸುವೆ,” ಎಂದು ಹೇಳಿದರು.




m

