Featured, ಆರೋಗ್ಯ, ಇತರೆ, ಸ್ಥಳೀಯ

*ದ. ಕ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಉದ್ಘಾಟನೆ

ಮಕ್ಕಳು ದೇಶದ ಸಂಪತ್ತು ಆ ಸಂಪತ್ತನ್ನು ಕಾಪಾಡುವ ಕರ್ತವ್ಯ ನಮ್ಮೆಲ್ಲರದ್ದು : ಡಾ. ಅಕ್ಷತಾ ಆದರ್ಶ

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಂಚಲನಾ ಸಮಿತಿ ವತಿಯಿಂದ  ನ 8 ರಂದು ಮಂಗಳೂರು ಕದ್ರಿ ಬಾಲಭವನದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಮಕ್ಕಳ ಕಲ್ಯಾಣ ಸಮಿತಿ ದ.ಕ. ಜಿಲ್ಲೆಯ ಅಧ್ಯಕ್ಷರಾದ ಡಾ| ಅಕ್ಷತಾ ಆದರ್ಶ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ನಮ್ಮ ದೇಶದ ಸಂಪತ್ತು. ಆ ಅಮೂಲ್ಯ ಸಂಪತ್ತಿನ ರಕ್ಷಣೆ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.
ಮಕ್ಕಳ ಆರೈಕೆ ಕೇವಲ ಅವರ ಪೋಷಕರಿಗೆ ಮಾತ್ರವಲ್ಲ ಸಮಾಜದ ವಿವಿಧ ಶ್ರೇಣಿಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ  ಎಂದು ಅಭಿಪ್ರಾಯ ಪಟ್ಟರು.ಮಕ್ಕಳ ಮಾಸೋತ್ಸವ ಸಮಿತಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಕಾರ್ಯಕ್ರಮದ ಆಯೋಜಕರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳ ಅನುಷ್ಠಾನ ಹಾಗೂ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣ ಮಾಡುವಲ್ಲಿ ವಿವಿಧ ಇಲಾಖೆ ಮತ್ತು ಜನ ಸಮುದಾಯದ ಸಹಭಾಗಿತ್ವ ಅತಿ ಅವಶ್ಯಕವಾಗಿದ್ದು ಅದನ್ನು ಸರ್ಕಾರವು ಕೂಡ ಕಾರ್ಯರೂಪಕ್ಕೆ ತರುವ ತೀರ್ಮಾನಕ್ಕೆ ಬಂದಿದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಉಸ್ಮಾನ್ ರವರು ಮಾತನಾಡಿ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ  ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಬೆಳಗಿನಿಂದ ಸಂಜೆಯವರೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.ಮಾದಕ ದ್ರವ್ಯ ಸೇವೆನೆಯ ದುಷ್ಪರಿಣಾಮದ ಬಗ್ಗೆ ಅರಿವು ಕಾರ್ಯಕ್ರಮ, ಮಕ್ಕಳ ಚಾರ್ಟರ್ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಮಾಲೋಚನ ಸಭೆ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಮಾಹಿತಿ ಕಾರ್ಯಕ್ರಮ, ಮಕ್ಕಳ ಹಕ್ಕುಗಳ ಅನುಷ್ಠಾನದ ಬಗ್ಗೆ ಆಗ್ರಹ, ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪುನರ್ ಪರಿಶೀಲನೆ, ಕಾರ್ಮಿಕ ಕಾಯ್ದೆಯ ಪ್ರಕಾರ ಕಟ್ಟಡ ನಿರ್ಮಾಪಕರಿಗೆ ಮಕ್ಕಳ ಸುರಕ್ಷೆಯ ಬಗ್ಗೆ ಅರಿವು ಕಾರ್ಯಕ್ರಮ, ನಗರ ಮಟ್ಟದಲ್ಲಿನಗರ ಮಕ್ಕಳ ಸಭೆ, ಮಕ್ಕಳ ಹಕ್ಕುಗಳ ರಕ್ಷಣಾ ನೀತಿಯ ಬಗ್ಗೆ ತರಬೇತಿ, ಮಕ್ಕಳ ಗ್ರಾಮ ಸಭೆ, ಸ್ವಸಹಾಯ ಸಂಘದ ಸದಸ್ಯರಿಗೆ ಪೋಕೋ ಕಾಯ್ದೆ-2012ರ ಕುರಿತು ಮಾಹಿತಿ,ಮಕ್ಕಳ ಹಕ್ಕುಗಳ ಬಗ್ಗೆ ಸಮುದಾಯದಲ್ಲಿ ಅರಿವು, ಶೈಕ್ಷಣಿಕ ರಂಗ ತಂಡಮಕ್ಕಳ ಹಕ್ಕುಗಳ ಬಗ್ಗೆ ಶೈಕ್ಷಣಿಕ ನಾಟಕಗಳು, ಪ್ರಶ್ನೋತ್ತರಗಳು ಮುಂತಾದ ಕಾರ್ಯಕ್ರಮಗಳು ನಡೆಯಿತು.
ಮಕ್ಕಳನ್ನು ಭಿಕ್ಷಾಟನೆಗೆ ಬಿಟ್ಟು ಅದರಿಂದ ಹಣ ಮಾಡುವ ವ್ಯಕ್ತಿಗಳು ಇದ್ದಾರೆ. ಮಕ್ಕಳ ಮಾರಾಟ ಜಾಲವೂ ಇದರ ಹಿಂದೆ ಸಕ್ರಿಯಾವಾಗಿದೆ. ತಾಯಿಯೇ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಬಕ್ಷೆ ಬೇಡುವುದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ, ಕಿಶೋರ ಕಾರ್ಮಿಕರಾಗಿ ದುಡಿಸುವುದು ಮೊದಲಾದ ಪ್ರಕರಣಗಳು ಕಂಡುಬಂದಾಗ ಅವನ್ನು ರಕ್ಷಿಸುವ ನಿಟ್ಟಿಲ್ಲಿ ಅವರಿಗೆ ಸೂಕ್ತ ಪುರ್ನವಸತಿ ಕಲ್ಪಿಸಬೇಕಾದ ಅಗತ್ಯವಿದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಮಂಗಳೂರು ಸಿಸಿಆರ್‌ಬಿ ಸಹಾಯಕ ಪೊಲೀಸ್ ಆಯುಕ್ತ ಗೀತಾ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ಸೇರಿದಂತೆ ಮಕ್ಕಳು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳು ಇತರೆಡೆಗೆ ಹೋಲಿಸಿದರೆ ಕಡಿಮೆ ಇದೆ. ಮಕ್ಕಳು ಯಾವುದೇ ರೀತಿಯ ಸಮಸ್ಯೆ ಸಂಕಷ್ಟದಲ್ಲಿ ಸಿಲುಕಿದ್ದರೆ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದರೆ ತತ್ ಕ್ಷಣ ರಕ್ಷಿಸುವ ಕೆಲಸ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆಯ ಅಧಿಕಾರಿ ವಿಲ್ಮಾ ರವರು ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ಇಲಾಖೆಯಿಂದ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಬಾಲಕಾರ್ಮಿಕರು, ರಸ್ತೆ ಬದಿಯಲ್ಲಿ ಶಿಕ್ಷಣ ವಂಚಿತ ಮಕ್ಕಳು ಕಂಡು ಬಂದರೆ, ಆ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿದರೆ ಅವರನ್ನು ರಕ್ಷಿಸಲು ಸುಲಭವಾಗಲಿದೆ ಎಂದರು.ಮಕ್ಕಳ ರಕ್ಷಣಾಧಿಕಾರಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭ 2023.24 ನೇ ಸಾಲಿನ ಮಕ್ಕಳ ಹಕ್ಕುಗಳ ಮಾಸೋ ತ್ಸವದ ನಿರ್ಣಯಗಳ ವರದಿ ಯನ್ನು ಬಿಡುಗಡೆಗೊಳಿಸಲಾಯಿತು.
ದ ಕ ಜಿಲ್ಲಾ ಶಿಕ್ಷಣ ಸಂಪನ್ಮೂಲ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಉಪಾಧ್ಯಕ್ಷರಾದ ಹಸೈನಾರ್ ಜಯನಗರ ಸ್ವಾಗತಿಸಿ, ಕಸ್ತೂರಿ ಬೊಳುವಾರು,ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ನಿರೂಪಿಸಿದರು. ಬೆಳ್ತಂಗಡಿ ಸಂಚಾಲಕ ಅಬ್ದುಲ್ ಖಾದರ್ ವಂದಿಸಿದರು.
ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಾಗೂ ಪಡಿ ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು.
ಬಳಿಕ ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ ಇಬ್ಬರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಇದೇ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಾಧಿಕಾರದ ವತಿಯಿಂದ ಲೋಕ ಅದಾಲತ್ ಬಗ್ಗೆ ಮಾಹಿತಿ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಹಕ್ಕುಗಳಮಾಸೋತ್ಸವ ಸಮಿತಿಯ ಸಂಚಾಲಕ ಮಹಮ್ಮದ್ ರಫೀಕ್ ದರ್ಬೆ ಯವರು ವಹಿಸಿದ್ದರು.
ಮಂಗಳೂರು ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜರವರು ಪ್ರಾಸ್ತಾವಿಕ ಮಾತನಾಡಿ ಮಾತೋತ್ಸವದ ರೂಪುರೇಖೆಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಸಿಸಿಆರ್‌ಬಿ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಗೀತಾ ಡಿ ಕುಲಕರ್ಣಿಯವರು ಮಾತನಾಡಿ ಮಕ್ಕಳಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಮಾಡಿದರು.

 

Related Posts