ಆಕ್ಷೇಪ ವ್ಯಕ್ತಪಡಿಸಿದ ದಲಿತ ಮುಖಂಡ ಜಯನ್ ಮಲ್ಪೆ
ಉಡುಪಿ, ಡಿ.9: ಸಾವರ್ಕರ್ ದೇಶಪ್ರೇಮಿಗಳ ಬಳಗದವರು ಗಂಗೊಳ್ಳಿಯಲ್ಲಿ ಡಿ.23ರಂದು ಆಯೋಜಿಸಲು ಉದ್ದೇಶಿಸಿರುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ಎಂಬ ನಾಟಕ ಪ್ರದರ್ಶನಕ್ಕೆ ದಲಿತ ಮುಖಂಡ ಜಯನ್ ಮಲ್ಪೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಂಗೊಳ್ಳಿ ತೀರಾ ಸಂವೇದನಾಶೀಲ ಪ್ರದೇಶವಾಗಿದ್ದು, ಈ ವಿಷಯ ತಮಗೆ ಈಗಾಗಲೇ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ. ಈ ನಾಟಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅನಗತ್ಯವಾಗಿ ಹಿಂದೂ ಧರ್ಮದ ವಕ್ತಾರನಂತೆ, ಮುಸ್ಲಿಂ ವಿರೋಧಿಯಾಗಿ ಹಾಗೂ ಅಸ್ಪೃಶ್ಯತೆಯ ಕುರಿತು ಇಲ್ಲಸಲ್ಲದ ಕಾಲ್ಪನಿಕ ಕಥೆಗಳನ್ನು ಕಟ್ಟಿಕೊಂಡು ಪ್ರದರ್ಶಿಸುವ ಅಪಾಯವಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾಡಳಿತವು, ಜಿಲ್ಲೆಯ ಎಲ್ಲಾ ದಲಿತ ನಾಯಕರಿಗೆ ನಾಟಕದ ವೀಡಿಯೊ ಪ್ರದರ್ಶನವನ್ನು ತೋರಿಸಿ, ಎಲ್ಲರ ಸಹಮತ ಪಡೆದು ನಂತರವೇ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ನಾಟಕಕ್ಕೆ ಅನುಮತಿ ನೀಡಿದಲ್ಲಿ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇರುವುದರಿಂದ, ಅನುಮತಿ ನೀಡುವ ಮೊದಲು ನಾಟಕದ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

