ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಮಟ್ಟದ ಯೋಜನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಡಿ.18ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ, ನವೆಂಬರ್ ತಿಂಗಳ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಪಾಲನಾ ವರದಿಯನ್ನು ಚರ್ಚಿಸಲಾಯಿತು. ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ, ಬಾಳುಗೋಡು ಗ್ರಾಮದ ಕೊತ್ನಡ್ಕ ನಿವಾಸಿ ಸುಂದರಿ ಅಜಿಲ ಅವರಿಗೆ ಸೂಕ್ತ ದಾಖಲಾತಿ ಇಲ್ಲದ ಕಾರಣ ಆಧಾರ್ ಕಾರ್ಡ್ ದೊರಕಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆಧಾರ್ ಕಾರ್ಡ್ ಮಾಡಿಕೊಡುವಂತೆ ಅಧಿಕಾರಿಗಳ ಗಮನಕ್ಕೆ ತಂದರು.
ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಕೆಇಆರ್‌ಸಿ ನಿಯಮಾವಳಿಯಂತೆ ಗ್ರಾಹಕರ ವಿದ್ಯುತ್ ಮಂಜೂರಾತಿ ಹೊರೆಗೆ ಸಮನಾಗಿ ಎರಡು ತಿಂಗಳ ವಿದ್ಯುತ್ ಬಿಲ್ಲಿನಷ್ಟು ಭದ್ರತಾ ಠೇವಣಿ ಗ್ರಾಹಕರ ಖಾತೆಯಲ್ಲಿ ಇರಬೇಕಾಗಿದೆ. ಪ್ರಸ್ತುತ ಈ ಠೇವಣಿ ಕೊರತೆಯಿರುವ ಗ್ರಾಹಕರಿಗೆ ವ್ಯತ್ಯಾಸ ಮೊತ್ತವನ್ನು ಹಂತ ಹಂತವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಪವರ್‌ಮ್ಯಾನ್ ಮುಖಾಂತರ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಸುಳ್ಯ ತಾಲೂಕು ಹಾಗೂ ಕಡಬ ತಾಲೂಕು ವ್ಯಾಪ್ತಿಯ ಅಂಗನವಾಡಿ, ಶಾಲಾ-ಕಾಲೇಜು ವಠಾರಗಳಲ್ಲಿದ್ದ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳನ್ನು ಸರ್ಕಾರದ ನಿರ್ದೇಶನದಂತೆ ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಬಾಕಿ ಇದ್ದರೆ ಪಟ್ಟಿ ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಸುಳ್ಯ ಶಾಖೆಯ ಕೊಯಿಕುಳಿ ಪ್ರದೇಶದ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿರುವುದರಿಂದ 3-ಫೇಸ್ ವಿದ್ಯುತ್ ಇಲ್ಲದೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದು, ತಕ್ಷಣ ಹೊಸ ಪರಿವರ್ತಕ ಅಳವಡಿಸುವಂತೆ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸುಳ್ಯದಲ್ಲಿ ಬಿಪಿಎಲ್ ನಿಂದ ಎಪಿಎಲ್‌ಗೆ ಪರಿವರ್ತನೆ ಗೊಂಡ ಕಾರ್ಡ್‌ಗಳು ಎಷ್ಟು? ಯಥಾಸ್ಥಿತಿಯಲ್ಲಿ ಇರಿಸಲಾದ ಕಾರ್ಡ್‌ಗಳು ಎಷ್ಟು? ಇಲ್ಲಿದೆ ವರದಿ…
ಅನ್ನಭಾಗ್ಯ ಯೋಜನೆಯ ಅನುಷ್ಠಾನ ಪ್ರಗತಿ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಭೆಗೆ ವಿವರವಾದ ಮಾಹಿತಿ ನೀಡಿದರು. ಸುಳ್ಯ ತಾಲೂಕಿನಲ್ಲಿ ಒಟ್ಟು 776 ಬಿಪಿಎಲ್ ಪಡಿತರ ಚೀಟಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಈ ಪೈಕಿ ಅರ್ಹತೆ ಇಲ್ಲದ 212 ಪಡಿತರ ಚೀಟಿಗಳನ್ನು ಎಪಿಎಲ್ ವರ್ಗಕ್ಕೆ ಪರಿವರ್ತಿಸಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸಿರುವ 242 ಪಡಿತರ ಚೀಟಿಗಳನ್ನು ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಉಳಿದಂತೆ 322 ಪಡಿತರ ಚೀಟಿಗಳ ಪರಿಶೀಲನೆ ಪ್ರಕ್ರಿಯೆ ಇನ್ನೂ ಬಾಕಿ ಇದ್ದು, ಅಗತ್ಯ ದಾಖಲೆ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆಯ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಪರಿಶೀಲನಾ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಅರ್ಹ ಪಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳು ಯಾವುದೇ ವ್ಯತ್ಯಯವಿಲ್ಲದೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನಲ್ಲಿ ಒಟ್ಟು 410 ಪಲಾನುಭವಿಗಳಿದ್ದು, ಶೇ.81.18ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಡಿ.23ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಜಿಲ್ಲಾ ಗ್ಯಾರಂಟಿ ಸಮಾವೇಶಕ್ಕೆ ಸುಳ್ಯ ತಾಲೂಕಿನ ಪಲಾನುಭವಿಗಳನ್ನು ಭಾಗವಹಿಸಲು ಮಾಡಿರುವ ವ್ಯವಸ್ಥೆ ಹಾಗೂ ಪೂರ್ವತಯಾರಿಗಳ ಕುರಿತು ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ರವಿ ಗುಂಡಡ್ಕ, ಧನುಷ್ ಕುಕ್ಕೇಟಿ, ಸೋಮಶೇಖರ್ ಕೇವಳ, ರಾಜು ನೆಲ್ಲಿಕುಮೇರಿ, ಎ.ಬಿ. ಅಬ್ಬಾಸ್, ಈಶ್ವರ ಆಳ್ವ, ಲತೀಫ್ ಅಡ್ಕಾರ್, ಇಬ್ರಾಹಿಂ ಶಿಲ್ಪಾ, ಶ್ರೀಮತಿ ಕಾಂತಿ ಬಿ.ಎಸ್., ಶ್ರೀಮತಿ ಭವಾನಿ ಬೊಮ್ಮಟ್ಟಿ ಉಪಸ್ಥಿತರಿದ್ದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ರಾಜಣ್ಣ ಸಭೆ ನಡೆಸಿಕೊಟ್ಟರು. ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

