ಆಧ್ಯಾತ್ಮಿಕತೆ–ಅಧ್ಯಯನ–ಪ್ರಕೃತಿ ಸೌಂದರ್ಯದ ಸಂಗಮ, ಕೊಡಗು–ಮೈಸೂರು ಪ್ರವಾಸದಲ್ಲಿ ವಿದ್ಯಾರ್ಥಿಗಳ ಮಾದರಿ ನಡೆ

ಜಟ್ಟಿಪಳ್ಳ
ಹಯಾತುಲ್ ಇಸ್ಲಾಂ ಕಮಿಟಿ (ರಿ.) ಜಟ್ಟಿಪಳ್ಳ ಇದರ ಅಧೀನದಲ್ಲಿರುವ ಬುಸ್ತಾನುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳು ನಡೆಸಿದ ಶೈಕ್ಷಣಿಕ ಪ್ರವಾಸವು ಮತ್ತೊಮ್ಮೆ ಮಾದರಿಯಾಗಿ ನಾಡಿನ ಗಮನ ಸೆಳೆಯಿತು. ಆಧ್ಯಾತ್ಮಿಕತೆ, ಅಧ್ಯಯನ, ಪ್ರಕೃತಿ ಸೌಂದರ್ಯ ಹಾಗೂ ಮನರಂಜನೆಯ ಸಮನ್ವಯದೊಂದಿಗೆ ಪ್ರವಾಸವು ಯಶಸ್ವಿಯಾಗಿ ಸಂಪನ್ನವಾಯಿತು.

ಪ್ರವಾಸದ ಮೊದಲ ದಿನ ಕೊಡಗಿನ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಎಮ್ಮೆಮಾಡು ಮಖಾಂ ಹಾಗೂ ಚೆರಿಯ ಪರಂಬು ಮಖಾಂಗಳಿಗೆ ಭೇಟಿ ನೀಡಿ ಝಿಯಾರತ್ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮಡಿಕೇರಿಯ ರಾಜಾಸೀಟ್‌ಗೆ ಭೇಟಿ ನೀಡಿ ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ವಿದ್ಯಾರ್ಥಿಗಳು ಆನಂದಿಸಿದರು.

ಪ್ರವಾಸದ ಮೊದಲ ದಿನ ಕೊಡಗಿನ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಎಮ್ಮೆಮಾಡು ಮಖಾಂ ಹಾಗೂ ಚೆರಿಯ ಪರಂಬು ಮಖಾಂಗಳಿಗೆ ಭೇಟಿ ನೀಡಿ ಝಿಯಾರತ್ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮಡಿಕೇರಿಯ ರಾಜಾಸೀಟ್‌ಗೆ ಭೇಟಿ ನೀಡಿ ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ವಿದ್ಯಾರ್ಥಿಗಳು ಆನಂದಿಸಿದರು. ನಂತರ ಹಾರಂಗಿ ಜಲಾಶಯಕ್ಕೆ ತೆರಳಿ ಜಲಾಶಯದ ಮಹತ್ವ, ಉಪಯೋಗ ಹಾಗೂ ನೀರಾವರಿ ವ್ಯವಸ್ಥೆಗಳ ಕುರಿತು ವಿವರವಾದ ಮಾಹಿತಿ ಪಡೆದರು. ಅಲ್ಲಿಂದ ನೇರವಾಗಿ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ನೀಡಿ ವಿವಿಧ ಮಾನವ ಸಂಸ್ಕೃತಿ ಪ್ರತಿಮೆಗಳ ಮೂಲಕ ಚಿಂತನೆ ನಡೆಸಿದರು. ಅಲ್ಪ ಮಟ್ಟಿನ ಆಟೋಟಗಳಲ್ಲಿ ವಿದ್ಯಾರ್ಥಿಗಳು ತಲ್ಲೀನರಾದರು. ಇದೇ ಸಂದರ್ಭದಲ್ಲಿ ಕಾವೇರಿ ನಿಸರ್ಗಧಾಮದ ಅಭಿವೃದ್ಧಿಗೆ ಸಂಬಂಧಪಟ್ಟವರು ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆಯ ಬಗ್ಗೆ ಪರಸ್ಪರ ಅಭಿಪ್ರಾಯ ವ್ಯಕ್ತಪಡಿಸಿದರು. ಸಮೀಪದಲ್ಲಿರುವ ಸ್ಕೇರಿ ಹೌಸ್ ವೀಕ್ಷಣೆ ವಿದ್ಯಾರ್ಥಿಗಳಿಗೆ ವಿಶೇಷ ಸಂತಸ ನೀಡಿತು.

ಮರುದಿನ ಮೈಸೂರು ಪ್ರವಾಸದಲ್ಲಿ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಸಂದರ್ಶಿಸಿ ವೈವಿಧ್ಯಮಯ ವನ್ಯಜೀವಿಗಳ ವೀಕ್ಷಣೆ ನಡೆಸಿದರು. ಜೀವ ವೈವಿಧ್ಯದ ಕುರಿತು ಅಧ್ಯಯನ ಮಾಡಲು ವಿದ್ಯಾರ್ಥಿಗಳು ಉತ್ಸುಕರಾದರು. ಲೋಕ ರಾಜನ್ ಅಕ್ವಾ ವರ್ಲ್ಡ್‌ನಲ್ಲಿ ನೂರಾರು ಬಗೆಯ ಜಲಚರ ಜೀವಿಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡು, ಅವುಗಳ ಅನ್ವೇಷಣೆಯತ್ತ ಆಸಕ್ತಿ ಬೆಳೆಸಿದರು. ಮಿರರ್ ಮೇಝ್‌ನಲ್ಲಿ ದಾರಿ ಹುಡುಕುವ ಅನುಭವ ಹಾಗೂ ಸ್ನೋ ಸಿಟಿಯ ಹಿಮಾಧಾರಿತ ಚಟುವಟಿಕೆಗಳು ಮಕ್ಕಳಿಗೆ ಅಪಾರ ಆನಂದ ನೀಡಿದವು.
ಜನಜಂಗುಳಿಯ ನಡುವೆ ಪ್ರಖ್ಯಾತ ಮೈಸೂರು ಅರಮನೆ ವೀಕ್ಷಣೆ ವಿಶೇಷ ಅನುಭವವಾಯಿತು. ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಪುರಾತನ ರೈಲು ಬೋಗಿಗಳು, ಪುಟಾಣಿ ರೈಲು ಸಂಚಾರ ವಿದ್ಯಾರ್ಥಿಗಳ ಗಮನ ಸೆಳೆಯಿತು. ರೈಲ್ವೆ ಕಾರ್ಯವಿಧಾನಗಳ ಅರಿವಿಗೆ ಇದು ಮಹತ್ವದ ಹೆಜ್ಜೆಯಾಯಿತು.

ಕೊನೆಯದಾಗಿ ಕೃಷ್ಣರಾಜಸಾಗರ (ಕೆಆರ್‌ಎಸ್) ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡಿ ಅದ್ಭುತ ಸಂಜೆ ನೀರಿನ ಕಾರಂಜಿ ಪ್ರದರ್ಶನವನ್ನು ವೀಕ್ಷಿಸಿದರು. ವಿಶಾಲ ಅಣೆಕಟ್ಟು ಹಾಗೂ ಅದರ ಸದುಪಯೋಗದ ಕುರಿತು ಮಾಹಿತಿ ಪಡೆದುಕೊಂಡ ವಿದ್ಯಾರ್ಥಿಗಳು, ಕೆಆರ್‌ಎಸ್‌ಗೆ ತೆರಳುವ ರಸ್ತೆ ಅಭಿವೃದ್ಧಿಗೊಳಿಸಿ ಸಂಚಾರವನ್ನು ಸುಗಮಗೊಳಿಸುವುದು ಕಾಲದ ಬೇಡಿಕೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆಧ್ಯಾತ್ಮಿಕತೆ, ಪಾಠ, ಆಟ ಮತ್ತು ಊಟಗಳೊಂದಿಗೆ ಪ್ರವಾಸವು ಸಾರ್ಥಕವಾಗಿ ಮುಕ್ತಾಯವಾಯಿತು. ಪ್ರವಾಸಕ್ಕೆ ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗೂ ಸಹಾಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ಅವರು ಮಾರ್ಗದರ್ಶಕರಾಗಿ ನೇತೃತ್ವ ವಹಿಸಿದ್ದರು. ರಕ್ಷಕ–ಪೋಷಕರ ಸಹಕಾರ ಹಾಗೂ ಹಯಾತುಲ್ ಇಸ್ಲಾಂ ಕಮಿಟಿ (ರಿ.) ಜಟ್ಟಿಪಳ್ಳ ಅವರ ಪ್ರೋತ್ಸಾಹ ಪ್ರವಾಸದ ಯಶಸ್ಸಿಗೆ ಕಾರಣವಾಯಿತು.

