Featured, ಕ್ರೀಡೆ, ಸ್ಥಳೀಯ

ಬೇಕಲ ಬೀಚ್ ಫೆಸ್ಟ್ : ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಣೆಗೆ ತೆರಳುತ್ತಿದ್ದ ವೇಳೆ ಪಳ್ಳಿಕ್ಕೆರೆ ಬಳಿ ಅಪಘಾತ – ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ಅಂಗವಾಗಿ ಡಿಸೆಂಬರ್ 29ರಂದು ರಾತ್ರಿ ಆಯೋಜಿಸಿದ್ದ ವೇಡನ್‌ರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಪೊಯಿನಾಚಿ ಪರಂಬ್ ಶಿವಮಂ ಹೌಸ್‌ನ ವೇಣುಗೋಪಾಲನ್ ನಾಯರ್ ಅವರ ಪುತ್ರ ಎಂ. ಶಿವನಂದನ್ (19) ಮೃತ ದುರ್ದೈವಿ. ಮಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದ ಶಿವನಂದನ್ ಮೊನ್ನೆ ರಾತ್ರಿ ಸುಮಾರು 9 ಗಂಟೆಯ ವೇಳೆ ಅಪಘಾತಕ್ಕೀಡಾಗಿದ್ದಾರೆ.
ನೆರೆಮನೆಯ ನಿವಾಸಿ ಹಾಗೂ ಸ್ನೇಹಿತನಾದ ಪರಂಬ್ ಕುಂಡಡ್ಕ ಹೌಸ್‌ನ ಕೆ. ಅಜೇಶ್ (20) ಅವರೊಂದಿಗೆ ಶಿವನಂದನ್ ಪಳ್ಳಿಕ್ಕೆರೆ ಬೀಚ್ ಕಡೆಗೆ ನಡೆದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೈಲ್ವೇ ಹಳಿಯ ಸಮೀಪದಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಣ್ಣೂರು ಭಾಗದಿಂದ ವೇಗವಾಗಿ ಬಂದ ರೈಲು ಶಿವನಂದನ್‌ಗೆ ಢಿಕ್ಕಿ ಹೊಡೆದಿದೆ ಎಂದು ಬೇಕಲ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.
ಘಟನೆಯ ಬಳಿಕ ಸ್ನೇಹಿತ ಅಜೇಶ್ ನೀಡಿದ ದೂರಿನ ಮೇರೆಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ವೇಣುಗೋಪಾಲನ್ ನಾಯರ್–ಸ್ಮಿತಾ ದಂಪತಿಯ ಪುತ್ರರಾಗಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.


ಇದೇ ಸಂದರ್ಭದಲ್ಲಿ ಬೇಕಲ ಬೀಚ್ ಫೆಸ್ಟ್‌ನಲ್ಲಿ ವೇಡನ್‌ರ ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಉಂಟಾದ ನೂಕುನುಗ್ಗಲು ಭಾರೀ ಆತಂಕಕ್ಕೆ ಕಾರಣವಾಯಿತು. ಜನಸಂದಣಿ ಹೆಚ್ಚಿದ ಪರಿಣಾಮ ಉಸಿರಾಟ ಸಮಸ್ಯೆಯಿಂದ ಕೆಲವರು ಕುಸಿದು ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ನೂಕುನುಗ್ಗಲು ಘಟನೆಯಲ್ಲಿ ಆರು ಮಂದಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ತಕ್ಷಣವೇ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ ಭರತ್ ರೆಡ್ಡಿ ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Related Posts