ವಿದ್ಯಾರ್ಥಿಗಳ ಕಳೆದುಹೋದ ಸಮಯ ಮತ್ತು ಅವರ ಮಾನಸಿಕ ಒತ್ತಡಕ್ಕೆ ಹೊಣೆ ಯಾರು?
ದೇಶದ ಭವಿಷ್ಯ ಎಂದೇ ಕರೆಯಲಾಗುವ ವಿದ್ಯಾರ್ಥಿಗಳ ಕನಸು, ಪರಿಶ್ರಮ ಮತ್ತು ಭರವಸೆಯೊಂದಿಗೆ ಆಟವಾಡಿದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇಂದು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಷಗಳ ಪರಿಶ್ರಮ, ನಿದ್ದೆರಹಿತ ರಾತ್ರಿ ಮತ್ತು ಕುಟುಂಬದ ನಿರೀಕ್ಷೆಗಳನ್ನು ಹೊತ್ತು ಪರೀಕ್ಷೆಗೆ ಹಾಜರಾಗಿದ್ದರೆ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಸಂಪೂರ್ಣ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕದಡಿವೆ.
ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗೆ ನ್ಯಾಯ ಸಿಗದಿದ್ದರೆ, ಪರಿಶ್ರಮದ ಮೌಲ್ಯವೇನು?
ಒಬ್ಬ ವಿದ್ಯಾರ್ಥಿ ವೈದ್ಯರಾಗಬೇಕೆಂಬ ಕನಸಿಗಾಗಿ ಎಷ್ಟು ತ್ಯಾಗ ಮಾಡುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಕೆಲವರು ಕೋಚಿಂಗ್ ಕೇಂದ್ರಗಳಲ್ಲಿ ವರ್ಷಗಳ ಕಾಲ ಸಿದ್ಧತೆ ನಡೆಸುತ್ತಾರೆ. ಹಲವರು ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ಓದನ್ನು ಮುಂದುವರಿಸುತ್ತಾರೆ. ಆದರೆ ಅಂತಹ ವಿದ್ಯಾರ್ಥಿಗಳ ಪರಿಶ್ರಮವನ್ನು ಕೆಲವರ ಅಕ್ರಮ ಮತ್ತು ಆಡಳಿತದ ನಿರ್ಲಕ್ಷ್ಯ ಕ್ಷಣಾರ್ಧದಲ್ಲಿ ಮಣ್ಣಿನಡಿಗೆ ಮಾಡಿಬಿಟ್ಟಿದೆ ಎಂಬ ಭಾವನೆ ಇಂದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿದೆ.
ತಪ್ಪು ಎಲ್ಲಿ ನಡೆಯಿತು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಾರ್ವಜನಿಕವಾಗಿ ಶಿಕ್ಷಿಸಬೇಕು.”
ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿರುವುದು ಮತ್ತಷ್ಟು ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯದ ಕುರಿತು ಸರ್ಕಾರ ಸ್ಪಷ್ಟನೆ ನೀಡದೆ ಮೌನವಾಗಿರುವುದು ಹಲವರ ಪ್ರಶ್ನೆಗೆ ಕಾರಣವಾಗಿದೆ.
ಒಂದು ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲಾಗದ ಸರ್ಕಾರ, ಕೋಟ್ಯಾಂತರ ವಿದ್ಯಾರ್ಥಿಗಳ ಕನಸು ಮತ್ತು ಭವಿಷ್ಯವನ್ನು ಹೇಗೆ ಕಾಪಾಡುತ್ತದೆ?”
ಇದು ಕೇವಲ ಒಂದು ಪರೀಕ್ಷೆಯ ವಿಷಯವಲ್ಲ. ಇದು ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಕುರಿತ ಪ್ರಶ್ನೆ. ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗೆ ನ್ಯಾಯ ಸಿಗದಿದ್ದರೆ, ಪರಿಶ್ರಮದ ಮೌಲ್ಯವೇನು ಎಂಬ ಪ್ರಶ್ನೆ ಎದುರಾಗುತ್ತದೆ. “ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಏನು?” ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.
ತಪ್ಪು ಎಲ್ಲಿ ನಡೆಯಿತು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪಾರದರ್ಶಕ ಮತ್ತು ಭದ್ರ ಪರೀಕ್ಷಾ ವ್ಯವಸ್ಥೆ ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಯಾಕೆಂದರೆ ವಿದ್ಯಾರ್ಥಿಗಳ ಭವಿಷ್ಯ ಯಾವುದೇ ರಾಜಕೀಯಕ್ಕಿಂತ ದೊಡ್ಡದು.





m
