ಮಾಡಾವು ಸೆಕ್ಟರ್ ಚಾಂಪಿಯನ್; ಈಶ್ವರಮಂಗಲ ರನ್ನರ್ಸ್ ಅಪ್, ಪುತ್ತೂರು ಸೆಕ್ಟರ್ ದ್ವಿತೀಯ ರನ್ನರ್ಸ್ ಅಪ್
ಮಾದಕ ಮುಕ್ತ ಸಮಾಜಕ್ಕಾಗಿ ಬೃಹತ್ ಜನಜಾಗೃತಿ ಅಭಿಯಾನ
ವರದಿ:- ಅಹ್ಮದ್ ಹಾಶಿಮಿ ಕುರಿಯ
(ದಅವಾ ಕಾರ್ಯದರ್ಶಿ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್)
ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ವರ್ಷಂಪ್ರತಿ ಆಯೋಜಿಸುವ ದಕ್ಷಿಣ ಏಷ್ಯಾದ ಅತಿದೊಡ್ಡ ಇಸ್ಲಾಮಿಕ್ ಸಾಂಸ್ಕೃತಿಕ ಉತ್ಸವವಾದ ಸಾಹಿತ್ಯೋತ್ಸವದ ಹದಿನಾಲ್ಕನೇ ಆವೃತ್ತಿಯ ಪುತ್ತೂರು ಡಿವಿಷನ್ ಮಟ್ಟದ ಸಾಹಿತ್ಯೋತ್ಸವವು ಭಾನುವಾರ ಪುತ್ತೂರಿನ ಪಡೀಲ್‌ನ ಎಂಡಿಎಸ್ ಹಾಲ್‌ನಲ್ಲಿ ವೈಭವಯುತವಾಗಿ ಸಂಪನ್ನಗೊಂಡಿತು.
ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಕಾರ್ಯಕ್ರಮ ರಾತ್ರಿ 10 ಗಂಟೆಯವರೆಗೆ ಅಚ್ಚುಕಟ್ಟಾಗಿ ನಡೆಯಿತು. ಏಳು ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ನಾಲ್ಕು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಆರು ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಾಹಿತ್ಯ, ಭಾಷಣ, ಪ್ರಬಂಧ, ಕಾವ್ಯ, ಕ್ವಿಜ್, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ದಿನವಿಡೀ ನಡೆದವು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಭಾಷಾ ಪ್ರಾವೀಣ್ಯ, ಸೃಜನಶೀಲತೆ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ಎಸ್‌ಎಸ್‌ಎಫ್ ಹಲವು ವರ್ಷಗಳಿಂದ ಸಾಹಿತ್ಯೋತ್ಸವವನ್ನು ಆಯೋಜಿಸುತ್ತಾ ಬಂದಿದೆ. ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ಇಸ್ಲಾಮಿಕ್ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಉತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಾಹಿತ್ಯೋತ್ಸವವು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಮಹತ್ವದ ವೇದಿಕೆಯಾಗುತ್ತಿದೆ.
ಸಂಜೆ 5 ಗಂಟೆಗೆ “ಮಾದಕ ಮುಕ್ತ ಸಮಾಜ” ಎಂಬ ಧ್ಯೇಯದೊಂದಿಗೆ ಎಸ್‌ಎಸ್‌ಎಫ್ ಪುತ್ತೂರು ಡಿವಿಷನ್ ವತಿಯಿಂದ ಬೃಹತ್ ಜಾಗೃತಿ ಆಂದೋಲನ ನಡೆಯಿತು. ನೂರಾರು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡ ಈ ಆಂದೋಲನದ ಮೂಲಕ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣದ ಅಗತ್ಯತೆಯ ಕುರಿತು ಬಲವಾದ ಸಂದೇಶ ಸಾರಲಾಯಿತು.

ಮಗ್ರಿಬ್ ನಮಾಝಿನ ಬಳಿಕ ಸಮಸ್ತ ಶತಮಾನೋತ್ಸವದ ಅಂಗವಾಗಿ ನಡೆದ ವಿಶೇಷ ಅಧಿವೇಶನದಲ್ಲಿ ರಾಫಿ ಹಿಮಮಿ ಖಾಮಿಲ್ ಸಖಾಫಿ ಅಯ್ಯಂಗೇರಿ ಉಸ್ತಾದ್ ಅವರು ಪ್ರೇರಣಾದಾಯಕ ಭಾಷಣ ಮಾಡಿ, ಯುವಜನತೆ ಶಿಕ್ಷಣ, ಧಾರ್ಮಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳೊಂದಿಗೆ ಬದುಕಿನ ಪಯಣ ಸಾಗಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿ ಸಾಹಿತ್ಯೋತ್ಸವಕ್ಕೆ ಶುಭ ಹಾರೈಸಿದರು. ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ದಿನವಿಡೀ ನಡೆದ ಸ್ಪರ್ಧೆಗಳ ಸಮಗ್ರ ಫಲಿತಾಂಶದಲ್ಲಿ ಮಾಡಾವು ಸೆಕ್ಟರ್ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಈಶ್ವರಮಂಗಲ ಸೆಕ್ಟರ್ ರನ್ನರ್ಸ್ ಅಪ್ ಹಾಗೂ ಪುತ್ತೂರು ಸೆಕ್ಟರ್ ದ್ವಿತೀಯ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡಿತು. ವಿಜೇತರಿಗೆ ಟ್ರೋಫಿ, ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಅಬುಲ್ ಬುಶ್ರಾ ಫೈಝಿ ಉಸ್ತಾದ್ ಸಂಪ್ಯ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಹಿರಿಯ ನ್ಯಾಯವಾದಿ ಅಡ್ವೊಕೇಟ್ ನೂರುದ್ದೀನ್ ಸಾಲ್ಮಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ ಅಧ್ಯಕ್ಷ ಅಝೀಝ್ ಚೆನ್ನಾರ್, ಕನ್ವೀನರ್ ಹಾರಿಸ್ ಅಡ್ಕ, ಫಿನಾನ್ಸ್ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ಎಸ್‌ವೈಎಸ್ ನಾಯಕ ಸ್ವಾಲಿಹ್ ಮುರ, ಎಸ್‌ಎಸ್‌ಎಫ್ ಪುತ್ತೂರು ಡಿವಿಷನ್ ಅಧ್ಯಕ್ಷ ಸಲಾಂ ಹನೀಫಿ, ಪ್ರಧಾನ ಕಾರ್ಯದರ್ಶಿ ಸಾಬಿತ್ ಪಾಟ್ರಕೊಡಿ, ಫಿನಾನ್ಸ್ ಕಾರ್ಯದರ್ಶಿ ಸಿನಾನ್ ಸಅದಿ ಈಶ್ವರಮಂಗಲ ಸೇರಿದಂತೆ ಎಸ್‌ಎಸ್‌ಎಫ್, ಎಸ್‌ವೈಎಸ್, ಮುಸ್ಲಿಂ ಜಮಾಅತ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಶ್ರಮವಹಿಸಿ ಸಹಕರಿಸಿದರು.




m
