Featured, ಇತರೆ, ಸ್ಥಳೀಯ

ತುರ್ತು ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ಮೆರೆದ ಅಂಬುಲನ್ಸ್ ಚಾಲಕರು: ನಿರಂತರ CPR ಮೂಲಕ ಜೀವ ಉಳಿಸಲು ಶ್ರಮ

ಒಂದು ಜೀವ ಉಳಿಸುವ ಉದ್ದೇಶದಿಂದ ತಮ್ಮ ಕರ್ತವ್ಯವನ್ನು ಮೀರಿ ಅವಿರತವಾಗಿ ಶ್ರಮಿಸಿದ ಈ ಅಂಬುಲನ್ಸ್ ಚಾಲಕರ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ತುರ್ತು ಸಂದರ್ಭಗಳಲ್ಲಿ ತರಬೇತಿ, ಸಮಯಪ್ರಜ್ಞೆ ಮತ್ತು ತಂಡದ ಸಹಕಾರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ

ಸುಳ್ಯ: ಕೊಡಗು ಜಿಲ್ಲೆಯ ಸಂಪಾಜೆ ಸಹಕಾರ ಸಂಘದ ಮಹಾಸಭೆ ನಡೆಯುತ್ತಿದ್ದ ವೇಳೆ ಆದಂ ಕುಂಞ ಸೆಂಟಿಯಾರ್ ಅವರು ಹಠಾತ್ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದ ಘಟನೆ ನಡೆದಿದೆ. ಅಲ್ಲಿದ್ದವರು ಕೂಡಲೇ ಅವರನ್ನು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ದಾಖಲಿಸಿದರು.
ವೈದ್ಯರು ಪರೀಕ್ಷಿಸಿದ ಬಳಿಕ ರೋಗಿಯ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ, ನಿರಂತರ CPR (Cardiopulmonary Resuscitation) ನೀಡುತ್ತಲೇ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.
ಈ ವೇಳೆ ಸ್ಥಳೀಯ ಅಂಬುಲನ್ಸ್ ಚಾಲಕರಾದ ತಾಜುದ್ದೀನ್ ಟರ್ಲಿ ಅವರು ಯಾವುದೇ ವಿಳಂಬವಿಲ್ಲದೆ ಕಾರ್ಯಪ್ರವೃತ್ತರಾಗಿ, ಅಂಬುಲನ್ಸ್ ಚಾಲನೆಯನ್ನು ಸುಳ್ಯ ಅಂಬುಲನ್ಸ್ ಚಾಲಕ-ಮಾಲಕರ ಸಂಘದ ಸದಸ್ಯ ರಚನ್ ಕಟೀಲ್ ಅವರಿಗೆ ವಹಿಸಿ, ತಾವೇ ರೋಗಿಗೆ ನಿರಂತರ CPR ನೀಡಲು ಆರಂಭಿಸಿದರು.
ಅಂಬುಲನ್ಸ್ ಗೂನಡ್ಕ ತಲುಪುವಷ್ಟರಲ್ಲಿ ದೀರ್ಘಕಾಲ CPR ನೀಡಿದ್ದರಿಂದ ತಾಜುದ್ದೀನ್ ಅವರು ಸುಸ್ತಾದಾಗ, ಮುಂಚಿತವಾಗಿಯೇ ಆರಂತೋಡು ಶರತ್ ಅವರಿಗೆ ಕರೆ ಮಾಡಿ ಸಿದ್ಧರಾಗುವಂತೆ ತಿಳಿಸಿದ್ದರು. ಆರಂತೋಡು ತಲುಪುತ್ತಿದ್ದಂತೆ ಶರತ್ ಅವರು ಅಂಬುಲನ್ಸ್ ಏರಿ CPR ಮುಂದುವರೆಸಿದರು. ಬಳಿಕ ಅವರು ಕೂಡ ಸುಸ್ತಾದಾಗ, ಮತ್ತೆ ತಾಜುದ್ದೀನ್ ಹಾಗೂ ರಚನ್ ಅವರು ಪರಸ್ಪರ ಸಹಕರಿಸುತ್ತಾ ಕೆವಿಜಿ ಆಸ್ಪತ್ರೆಗೆ ತಲುಪುವವರೆಗೆ CPR ಅನ್ನು ನಿರಂತರವಾಗಿ ಮುಂದುವರಿಸಿದರು.
ಆಸ್ಪತ್ರೆ ತಲುಪಿದ ಬಳಿಕವೂ ವೈದ್ಯರು ಮತ್ತು ಸಿಬ್ಬಂದಿ ಸುಮಾರು 15 ನಿಮಿಷಗಳ ಕಾಲ ಸತತವಾಗಿ CPR ನೀಡಿ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ ಎಲ್ಲಾ ಪ್ರಯತ್ನಗಳ ನಡುವೆಯೂ ಆದಂ ಕುಂಞ ಸೆಂಟಿಯಾರ್ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ತುರ್ತು ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ, ಸಮನ್ವಯ ಮತ್ತು ಮಾನವೀಯತೆಯನ್ನು ಮೆರೆದ ತಾಜುದ್ದೀನ್ ಟರ್ಲಿ, ರಚನ್ ಕಟೀಲ್ ಹಾಗೂ ಆರಂತೋಡು ಶರತ್ ಅವರ ಕಾರ್ಯವನ್ನು ಸಾರ್ವಜನಿಕರು ಹಾಗೂ ಅಂಬುಲನ್ಸ್ ಚಾಲಕ-ಮಾಲಕರ ಸಂಘ, ಸುಳ್ಯ ತಾಲೂಕು ಹೃತ್ಪೂರ್ವಕವಾಗಿ ಶ್ಲಾಘಿಸಿದೆ.
ಒಂದು ಜೀವ ಉಳಿಸುವ ಉದ್ದೇಶದಿಂದ ತಮ್ಮ ಕರ್ತವ್ಯವನ್ನು ಮೀರಿ ಅವಿರತವಾಗಿ ಶ್ರಮಿಸಿದ ಈ ಅಂಬುಲನ್ಸ್ ಚಾಲಕರ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ತುರ್ತು ಸಂದರ್ಭಗಳಲ್ಲಿ ತರಬೇತಿ, ಸಮಯಪ್ರಜ್ಞೆ ಮತ್ತು ತಂಡದ ಸಹಕಾರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ
m

Related Posts