ನವದೆಹಲಿ: ಮೇ 3 ರಂದು ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆಸಲಾಗುವ ನೀಟ್ ಯುಜಿ (NEET UG) 2026 ಪರೀಕ್ಷೆಯನ್ನು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿದೆ. ಪರೀಕ್ಷಾ ಅಕ್ರಮ ಮತ್ತು ಪಶ್ನೆಪತ್ರಿಕೆ ಸೋರಿಕೆಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ
ಕಳೆದ ಮೇ 3 ರಂದು ನಡೆದಿದ್ದ ಪರೀಕ್ಷೆಯ ಪಶ್ನೆಪತ್ರಿಕೆಗಳು ಮೊದಲೇ ಸೋರಿಕೆಯಾಗಿದ್ದವು ಎಂಬ ದೂರುಗಳು ಕೇಳಿಬಂದಿದ್ದವು. ತನಿಖಾ ಸಂಸ್ಥೆಗಳ ವರದಿಯ ಪ್ರಕಾರ, ಪರೀಕ್ಷೆಗೂ ಮುನ್ನವೇ ಕೆಲವು ಅಭ್ಯರ್ಥಿಗಳಿಗೆ ಲಭ್ಯವಾಗಿದ್ದ “ಗೆಸ್ ಪೇಪರ್”ನಲ್ಲಿ ಪರೀಕ್ಷೆಯ ಬಹುತೇಕ ಪ್ರಶ್ನೆಗಳು ಇರುವುದು ಪತ್ತೆಯಾಗಿದೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.
ಪ್ರಕರಣ ಸಿಬಿಐ ತನಿಖೆಗೆ ನೀಡಿ ಆದೇಶ
ಈ ಇಡೀ ಪ್ರಕರಣದ ಹಿಂದೆ ಇರುವ ವ್ಯವಸ್ಥಿತ ಜಾಲವನ್ನು ಭೇದಿಸಲು ಭಾರತ ಸರ್ಕಾರವು ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಿದೆ. ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮರುಪರೀಕ್ಷೆಯ ವಿವರಗಳು
ಹೊಸ ದಿನಾಂಕ: ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ NTA ಅಧಿಕೃತವಾಗಿ ಪ್ರಕಟಿಸಲಿದೆ.
ಶುಲ್ಕ ವಿನಾಯಿತಿ: ಅಭ್ಯರ್ಥಿಗಳು ಮರುಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವಂತಿಲ್ಲ. ಈ ಹಿಂದೆ ಪಾವತಿಸಿದ ಶುಲ್ಕವನ್ನೇ ಪರಿಗಣಿಸಲಾಗುವುದು.
ಹೊಸ ಪ್ರವೇಶ ಪತ್ರ: ಮರುಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ಹೊಸ ಪ್ರವೇಶ ಪತ್ರಗಳನ್ನು (Admit Cards) ಬಿಡುಗಡೆ ಮಾಡಲಾಗುವುದು.
ಅರ್ಜಿ: ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಮೊದಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು.
ಅಧಿಕೃತ ಮಾಹಿತಿ:ಪರೀಕ್ಷಾರ್ಥಿಗಳು ಮತ್ತು ಪೋಷಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಲಾಗಿದೆ. ಪ್ರತಿಯೊಂದು ಅಪ್‌ಡೇಟ್‌ಗಾಗಿ ಅಧಿಕೃತ ವೆಬ್‌ಸೈಟ್ www.nta.ac.in ಅಥವಾ neet.nta.nic.in ಅನ್ನು ನಿಯಮಿತವಾಗಿ ಗಮನಿಸಲು ಸೂಚಿಸಲಾಗಿದೆ.





m
