ತಿರುವನಂತಪುರಂ : ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ, ಅದರ ರಾಜಕೀಯ ಪ್ರತಿಧ್ವನಿ ಇದೀಗ ಕರ್ನಾಟಕ ಕಾಂಗ್ರೆಸ್ ಅಂಗಳದಲ್ಲೂ ಕೇಳಿಬರುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಈ ಕುರಿತು ಕೇರಳದ ಪ್ರಮುಖ ದೃಶ್ಯ ಮಾಧ್ಯಮವೊಂದು ವರದಿ ಪ್ರಸಾರ ಮಾಡಿದ್ದು, ಅದು ಎರಡು ರಾಜ್ಯಗಳ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಪ್ರಸಾರವಾದ “ನೇರಾನೇರ ವರದಿ”ಯಲ್ಲಿ, ಕೇರಳ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಮುಖ ನಾಯಕರ ನಡುವೆ ಪೈಪೋಟಿ ತೀವ್ರಗೊಂಡಿದೆ ಎಂದು ಉಲ್ಲೇಖಿಸಲಾಗಿದೆ. ನಿನ್ನೆ ಪ್ರಸಾರ ಗೊಂಡ ಕೇರಳದ ಪ್ರಮುಖ ದೃಶ್ಯ ಮಾಧ್ಯಮದ ವರದಿಯ ಪ್ರಕಾರ, ಮೈತ್ರಿ ಪಕ್ಷವಾದ ಮುಸ್ಲಿಂ ಲೀಗ್ ಆರಂಭದಲ್ಲಿ ವಿಪಕ್ಷ ನಾಯಕ ವಿ.ಡಿ. ಸತೀಶನ್ ಪರ ಒಲವು ವ್ಯಕ್ತಪಡಿಸಿದ್ದರೆಂದು ತಿಳಿದುಬಂದಿದೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಬಲವಾದ ಹಿಡಿತ ಹೊಂದಿರುವ ಕೆ.ಸಿ. ವೇಣುಗೋಪಾಲ್ ಪರವೂ ಬಲವಾದ ಲಾಬಿ ನಡೆಯುತ್ತಿದೆ ಎನ್ನಲಾಗಿದೆ.
ಈ ರಾಜಕೀಯ ಬೆಳವಣಿಗೆಯ ನಡುವೆ, ಮುಸ್ಲಿಂ ಲೀಗ್ ನಾಯಕತ್ವವನ್ನು ಮನವೊಲಿಸುವ ಹೊಣೆಗಾರಿಕೆಯನ್ನು ಕರ್ನಾಟಕ ಕಾಂಗ್ರೆಸ್ ಮುಖಂಡರಿಗೆ ವಹಿಸಲಾಗಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ವಿಶೇಷವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಮೂಲಕ ಲೀಗ್ ನಾಯಕತ್ವದ ಮೇಲೆ ಪ್ರಭಾವ ಬೀರುವ ತಂತ್ರ ರೂಪಿಸಲಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಇದರ ಜೊತೆಗೆ, ಕೆ.ಸಿ. ವೇಣುಗೋಪಾಲ್ ಅವರಿಗೆ ಬೆಂಬಲ ವ್ಯಕ್ತವಾದರೆ ಕರ್ನಾಟಕದಲ್ಲಿ ಮುಸ್ಲಿಂ ಲೀಗ್ ಅಂಗಸಂಸ್ಥೆಯಾದ AIKMCCಗೆ ವಿಧಾನ ಪರಿಷತ್ (MLC) ಸ್ಥಾನ ನೀಡುವ ಭರವಸೆಯೂ ಒಳಒಪ್ಪಂದದ ಭಾಗವಾಗಿದೆ ಎಂಬ ರಾಜಕೀಯ ಗುಸುಗುಸುಗಳು ಕೇಳಿಬರುತ್ತಿವೆ.
ಒಟ್ಟಾರೆ, ಕೇರಳ ಮುಖ್ಯಮಂತ್ರಿ ಆಯ್ಕೆ ಈಗ ಕೇವಲ ರಾಜ್ಯ ರಾಜಕೀಯದ ವಿಷಯವಾಗಿರದೇ, ಕರ್ನಾಟಕದ ರಾಜಕೀಯ ಸಮೀಕರಣಗಳನ್ನೂ ಸ್ಪರ್ಶಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಯಾರ ಪರ ತೀರ್ಮಾನ ಕೈಗೊಳ್ಳಲಿದೆ ಎಂಬುದರತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.





m
