ಸುಳ್ಯ, ಜುಲೈ 20: ಸಂಪಾಜೆ ಸಮೀಪದ ಕಲ್ಲುಗುಂಡಿಯಲ್ಲಿ ನಡೆದ ವಿವಾಹಿತೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮೃತೆಯ ತಾಯಿ ತನ್ನ ಮಗಳನ್ನು ಅತ್ತೆ, ಮಾವ ಹಾಗೂ ನಾದಿನಿ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತರನ್ನು ಫಾತಿಮತ್ ನಿಶಾನಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ವಿರುದ್ಧ ಆರೋಪ ಮಾಡಲಾಗಿದೆ.
ಈ ಸಂಬಂಧ ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ (43) ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ತಮ್ಮ ಪುತ್ರಿ ಫಾತಿಮತ್ ನಿಶಾನಾಳನ್ನು ಆರೋಪಿಗಳ ಕುಟುಂಬಕ್ಕೆ ವಿವಾಹ ಮಾಡಿಕೊಟ್ಟಿದ್ದರು.
ಜುಲೈ 18ರಂದು ರಾತ್ರಿ ಫಾತಿಮತ್ ನಿಶಾನಾ ತಾಯಿಗೆ ದೂರವಾಣಿ ಕರೆ ಮಾಡಿ, ತನ್ನ ಮಾವ ಅಲವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ. ತಾಯಿ-ಮಗಳು ಮಾತನಾಡುತ್ತಿದ್ದ ವೇಳೆ, ಫೋನ್ ಅನ್ನು ಕಸಿದುಕೊಂಡ ಮಾವ ಅಲವಿ, “ಮಗಳನ್ನು ಕೊಲ್ಲುವುದಾಗಿ” ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಮಾಹಿತಿ ತಿಳಿದ ತಕ್ಷಣ ಜುಬೈದಾ ಅವರು ಮಗಳ ಮನೆಗೆ ತೆರಳಿದ್ದು, ಆಗಾಗಲೇ ಫಾತಿಮತ್ ನಿಶಾನಾ ಮೃತಪಟ್ಟಿರುವುದಾಗಿ ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ತನ್ನ ಮಗಳನ್ನು ಆರೋಪಿಗಳಾದ ಅಲವಿ, ಆಯಿಷಾ ಹಾಗೂ ಫಸೀಲಾ ಸೇರಿ ಕೊಲೆ ಮಾಡಿದ್ದಾರೆ ಎಂದು ಜುಬೈದಾ ಆರೋಪಿಸಿದ್ದಾರೆ.
ಜುಬೈದಾ ನೀಡಿದ ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026ರಡಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 85, 103(1) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.





m
