ಮಂಗಳೂರು, ಜುಲೈ 20: ಮಲಗಿದ್ದ ತಮ್ಮನ ತಲೆಗೆ ಭಾರೀ ಗಾತ್ರದ ಕಲ್ಲು ಎತ್ತಿಹಾಕಿ ಸ್ವಂತ ಅಣ್ಣನೇ ಬರ್ಬರವಾಗಿ ಹತ್ಯೆಗೈದ ಘಟನೆ ಸುರತ್ಕಲ್‌ನ ಚೊಕ್ಕಬೆಟ್ಟು ಮಠದ ಸಮೀಪ ಭಾನುವಾರ ತಡರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕೊಲೆಯಾದ ಯುವಕನನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಆತನ ಅಣ್ಣ ಸೋಮನಾಥ (21).
ಇವರಿಬ್ಬರೂ ತಾಯಿಯೊಂದಿಗೆ ಸುರತ್ಕಲ್‌ನ ಚೊಕ್ಕಬೆಟ್ಟು ಮಠದ ಬಳಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ತಾಯಿ ಊರಿಗೆ ತೆರಳಿದ್ದರಿಂದ ಘಟನೆ ನಡೆದ ವೇಳೆ ಸಹೋದರರಿಬ್ಬರೇ ಮನೆಯಲ್ಲಿ ಇದ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರ ರಾತ್ರಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿ ತೀವ್ರ ವಾಗ್ವಾದ ನಡೆದಿದೆ. ಬಳಿಕ ಮಲ್ಲಿಕಾರ್ಜುನ ತನ್ನ ಕೋಣೆಯಲ್ಲಿ ಮಲಗಿದ್ದನು. ತಡರಾತ್ರಿ ಆತ ಗಾಢ ನಿದ್ರೆಯಲ್ಲಿದ್ದಾಗ, ಆಕ್ರೋಶಗೊಂಡ ಸೋಮನಾಥ ಮಲಗಿದ್ದ ಸ್ಥಳದಲ್ಲೇ ಭಾರೀ ಗಾತ್ರದ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವಗೊಂಡ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೃತ್ಯ ಎಸಗಿದ ಬಳಿಕ ಸೋಮನಾಥ ಏನೂ ಆಗದಂತೆ ವರ್ತಿಸಿದ್ದು, ಸೋಮವಾರ ಬೆಳಿಗ್ಗೆ ನೆರೆಹೊರೆಯವರ ಬಳಿ ಹೋಗಿ, “ನನ್ನ ತಮ್ಮ ನಿದ್ರೆಯಿಂದ ಎದ್ದಿಲ್ಲ” ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಸುರತ್ಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ವೇಳೆ, ರಾತ್ರಿ ನಡೆದ ಜಗಳದ ವೇಳೆ ಕೋಪದ ಭರದಲ್ಲಿ ತಮ್ಮನನ್ನು ಹತ್ಯೆಗೈದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎಂ., ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ತಂಡ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.




m
