ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿಂಧೆ ಬಣದ ಶಿವಸೇನೆ ಮೈತ್ರಿ ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವ ನಡುವೆಯೇ, ನಗರಸಭೆಯೊಂದರಲ್ಲಿ ರಾಜಕೀಯ ಗಣಿತ ಅಚ್ಚರಿಯ ತಿರುವು ಪಡೆದುಕೊಂಡಿದೆ. ರಾಜ್ಯದಲ್ಲಿ ಮಿತ್ರರಾಗಿರುವ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ನಗರಸಭೆಯಲ್ಲಿ ಶತ್ರುಗಳಾಗಿ ಎದುರುಬಿದ್ದಿದ್ದು, ಅಧಿಕಾರದ ಆಟದಲ್ಲಿ ಬಿಜೆಪಿ ಕಾಂಗ್ರೆಸ್ ಕೈ ಹಿಡಿದು ಹೊಸ ಸಮೀಕರಣ ರಚಿಸಿದೆ.
ಮಹಾರಾಷ್ಟ್ರದ ಅಂಬರ್ನಾಥ್ ನಗರಸಭೆಯಲ್ಲಿ ಬಿಜೆಪಿ ಸದಸ್ಯೆ ತೇಜಶ್ರೀ ಕರಂಜುಲೆ ಮೇಯರ್ ಪಟ್ಟವನ್ನು ಅಲಂಕರಿಸಿದ್ದು, ಈ ಗೆಲುವು ‘ಅಸಾಧ್ಯ’ ಎಂದುಕೊಂಡಿದ್ದ ಮೈತ್ರಿಯ ಫಲವಾಗಿದೆ. ಬಿಜೆಪಿಯ 16, ಕಾಂಗ್ರೆಸ್‌ನ 12 ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ)ದ ನಾಲ್ವರು ಸದಸ್ಯರ ಬೆಂಬಲದೊಂದಿಗೆ ರಚಿಸಲಾದ ಈ ಮೈತ್ರಿಕೂಟ, ಶಿಂಧೆ ಬಣದ ಶಿವಸೇನೆಯನ್ನು ಬಹುಮತದ ಹೊರಗೇ ನಿಲ್ಲಿಸಿದೆ.
ಡಿಸೆಂಬರ್ 20ರಂದು ನಡೆದ 60 ಸ್ಥಾನಗಳ ನಗರಸಭೆ ಚುನಾವಣೆಯಲ್ಲಿ ಶಿಂಧೆ ಬಣದ ಶಿವಸೇನೆ 27 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ ನಾಲ್ಕು ಸ್ಥಾನಗಳ ಕೊರತೆ ಎದುರಾಯಿತು. ಅಧಿಕೃತ ಮೈತ್ರಿ ಪಕ್ಷ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದರೂ, ಮೇಯರ್ ಸ್ಥಾನವನ್ನು ಶಿವಸೇನೆಗೆ ಬಿಟ್ಟುಕೊಡುವ ಮನಸ್ಸು ಬಿಜೆಪಿ ತೋರಲಿಲ್ಲ. ಪರಿಣಾಮ, ‘ವಿಚಾರಧಾರೆಯನ್ನು ಪಕ್ಕಕ್ಕಿಟ್ಟು ಅಧಿಕಾರಕ್ಕೆ ಮುನ್ನಡೆ’ ಎಂಬ ತತ್ವದಡಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಅಧಿಕಾರದ ಬಾಗಿಲು ತೆರೆದಿದೆ.
‘ಅಂಬರ್ನಾಥ್ ವಿಕಾಸ್ ಅಘಾಡಿ’ ಎಂಬ ಹೆಸರಿನಲ್ಲಿ ಬಿಜೆಪಿ–ಕಾಂಗ್ರೆಸ್–ಎನ್‌ಸಿಪಿ (ಅಜಿತ್ ಪವಾರ್ ಬಣ) ಒಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಮೈತ್ರಿಗೆ ಯಾವುದೇ ಔಪಚಾರಿಕ ಅನುಮೋದನೆ ನೀಡಿಲ್ಲ ಎಂದು ಕಾಂಗ್ರೆಸ್ ರಾಜ್ಯ ನಾಯಕತ್ವ ಸ್ಪಷ್ಟಪಡಿಸಿದರೆ, “ಇವು ಸ್ಥಳೀಯ ಚುನಾವಣೆಗಳು; ಸ್ಥಳೀಯ ನಾಯಕರು ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಬಹುದು” ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಇತ್ತ ಶಿಂಧೆ ಬಣದ ಶಾಸಕ ಬಾಲಾಜಿ ಕಿನಿಕರ್ ಈ ಬೆಳವಣಿಗೆಯನ್ನು “ಅಪವಿತ್ರ ಮೈತ್ರಿ” ಎಂದು ಕಿಡಿಕಾರಿದ್ದಾರೆ. ದೇಶಾದ್ಯಂತ ‘ಕಾಂಗ್ರೆಸ್ ಮುಕ್ತ ಭಾರತ’ದ ಘೋಷಣೆ ಮಾಡುವ ಬಿಜೆಪಿ, ಅಂಬರ್ನಾಥ್‌ನಲ್ಲಿ ಮಾತ್ರ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು, ಇದು ಶಿವಸೇನೆಯ ಬೆನ್ನಿಗೆ ಚೂರಿ ಹಾಕಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

