Featured, ಇತರೆ, ಸ್ಥಳೀಯ

ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ

ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಾಲೂಕು ದಂಡಾಧಿಕಾರಿ ಮಂಜುಳಾ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಧರ್ಮಪಾಲ ಕೊಯಂಗಾಜೆ, ಜಯಪ್ರಕಾಶ್, ಪರಮೇಶ್ವರ ಕೆಂಬಾರೆ, ತೀರ್ಥರಾಮ ಜಾಲಸೂರು, ಅಶ್ರಫ್ ಗುಂಡಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಕೆಡಿಪಿ ಸದಸ್ಯ ಧರ್ಮಪಾಲ ಕೊಯಂಗಾಜೆ ಅವರು, ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ಚಿಕಿತ್ಸೆಗೆ ಬಂದ ಮಗು ಮೃತಪಟ್ಟ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ ವಿವರ ಕೇಳಿದರು. ಉತ್ತರಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪ್ರಕರಣ ನಡೆದಿರುವುದು ಸತ್ಯವಾದರೂ ತಮ್ಮ ಬಳಿ ಸಂಪೂರ್ಣ ಮಾಹಿತಿಯಿಲ್ಲವೆಂದು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಸದಸ್ಯರು, ಇಲಾಖೆಯ ಮೇಲಾಧಿಕಾರಿಗಳನ್ನು ಸಭೆಗೆ ಕರೆಯಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮಟ್ಟದ ತನಿಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಅಲ್ಲದೆ, ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗಾಗಿ ರೋಗಿಗಳನ್ನು ಹೊರಗಿನ ಖಾಸಗಿ ಲ್ಯಾಬೊರೇಟರಿಗೆ ಕಳುಹಿಸಲಾಗುತ್ತಿರುವುದು ಹಾಗೂ ಪರೀಕ್ಷೆಗೆ 800 ರಿಂದ 1000 ರೂ. ವರೆಗೆ ಶುಲ್ಕ ವಸೂಲಿ ಮಾಡುತ್ತಿರುವ ವಿಷಯದ ಕುರಿತು ಧರ್ಮಪಾಲ ಕೊಯಂಗಾಜೆ ಪ್ರಶ್ನಿಸಿದರು. ಉತ್ತರಿಸಿದ ಆಡಳಿತಾಧಿಕಾರಿಗಳು, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಿಂದಲೇ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಯ ನಂತರವೂ ರಕ್ತ ಪರೀಕ್ಷೆ ನಡೆಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಗುತ್ತಿಗಾರು ಪ್ರದೇಶಕ್ಕೆ ಶಾಶ್ವತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕೆಡಿಪಿ ಸದಸ್ಯ ಪರಮೇಶ್ವರ ಕೆಂಬಾರೆ ಮನವಿ ಮಾಡಿದರು.

 

Related Posts