ಸುಳ್ಯ ತಾಲೂಕಿನ ಅರಂತೋಡು ಪ್ರದೇಶದಿಂದ ಪವಿತ್ರ ಉಮ್ರಾ ಯಾತ್ರೆ ನೆರವೇರಿಸಲು ತೆರಳಿದ್ದ ಮಹಿಳೆಯೊಬ್ಬರು, ಉಮ್ರಾ ಕರ್ಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಊರಿಗೆ ಮರಳುವ ವಲಸೆ ಪ್ರಕ್ರಿಯೆಯ ವೇಳೆ ಸೌದಿ ಅರೇಬಿಯಾದ ಜಿದ್ದಾ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಕಸ್ಮಾತ್ತಾಗಿ ಕುಸಿದು ಬಿದ್ದ ಘಟನೆ ನಡೆದಿದೆ.
ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆ ವೇಳೆಯಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟ ಮಹಿಳೆಯನ್ನು ಅರಂತೋಡು ಉದಯನಗರ ನಿವಾಸಿ, ದಿವಂಗತ ಅಬ್ದುಲ್ ರಹಿಮಾನ್ ಅವರ ಪತ್ನಿ ಖದೀಜ (56) ಎಂದು ಗುರುತಿಸಲಾಗಿದೆ. ಮೃತರು ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತದೇಹವನ್ನು ಜಿದ್ದಾದ ಫಹದ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮುಂದಿನ ಕಾನೂನು ಹಾಗೂ ವಲಸೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

