Featured, ಇತರೆ

ರಾಮಕುಂಜ ಪಾದೆಯಲ್ಲಿ ಹೃದಯವಿದ್ರಾವಕ ಘಟನೆ: ತಂದೆಗೆ ಇರಿದು ಮಗ ಶೂಟೌಟ್‌ ಮಾಡಿಕೊಂಡು ಆತ್ಮಹತ್ಯೆ : ಕ್ಷಣಿಕ ಆಕ್ರೋಶಕ್ಕೆ ಬಲಿಯಾದ ಜೀವ..!!!

ಕಡಬ, ಜ. 24:
ತಂದೆ–ಮಗನ ಸಂಬಂಧಕ್ಕೆ ಕಪ್ಪು ನೆರಳು ಎರಚಿದ ಹೃದಯವಿದ್ರಾವಕ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಬಾಲಕನೋರ್ವ ತನ್ನ ತಂದೆಯ ಮೇಲೆಯೇ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ, ಬಳಿಕ ಮನೆಯಲ್ಲಿದ್ದ ಕೋವಿಯಿಂದ ಶೂಟೌಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಊರನ್ನೇ ಆಘಾತಕ್ಕೆ ಒಳಪಡಿಸಿದೆ.
ಶೂಟೌಟ್‌ ಮಾಡಿಕೊಂಡು ಮೃತಪಟ್ಟ ಯುವಕನನ್ನು ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ ಮೋಕ್ಷ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ತಂದೆಯೊಂದಿಗೆ ಉಂಟಾದ ಜಗಳವೇ ಈ ದುರಂತಕ್ಕೆ ಕಾರಣವಾಗಿದ್ದು, ಆಕ್ರೋಶದ ಕ್ಷಣದಲ್ಲಿ ಮೋಕ್ಷ ತಂದೆಗೆ ಚೂರಿಯಿಂದ ಇರಿದ ನಂತರ, ಅತೀವ ಆತಂಕ ಮತ್ತು ಮನೋವ್ಯಥೆಯ ನಡುವೆ ಮನೆದಲ್ಲಿದ್ದ ಕೋವಿಯಿಂದ ಶೂಟೌಟ್‌ ಮಾಡಿಕೊಂಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.

ಕೇರಳ ಮೂಲದವರಾದ ವಸಂತ ಅಮೀನ್ ಅವರು ರಾಮಕುಂಜ ಪಾದೆ ಪ್ರದೇಶದಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿ ತಂದೆ–ಮಗ ಒಟ್ಟಾಗಿ ವಾಸವಾಗಿದ್ದರು. ಮಂಗಳೂರು ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಮೋಕ್ಷ, ಯಾವ ಕಾರಣಕ್ಕಾಗಿ ಇಂತಹ ತೀವ್ರ ನಿರ್ಧಾರಕ್ಕೆ ಮುಂದಾದನು ಎಂಬುದು ಇನ್ನೂ ತಿಳಿದುಬರಬೇಕಿದ್ದು, ಇದರ ಸತ್ಯಾಸತ್ಯತೆ ಪೊಲೀಸ್‌ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ವಸಂತ ಅಮೀನ್ ಅವರನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ತಂದೆ–ಮಗನ ನಡುವಿನ ಅಸಮಾಧಾನ ದುರಂತವಾಗಿ ಅಂತ್ಯಗೊಂಡ ಈ ಘಟನೆ ಗ್ರಾಮಸ್ಥರನ್ನು ಮೌನಕ್ಕೆ ದೂಡಿದ್ದು, ಮನಸ್ಸು ಕಲುಷಿತಗೊಳಿಸುವ ನೋವು ಎಲ್ಲೆಡೆ ಹರಡಿದೆ.
ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related Posts