Featured, ಇತರೆ, ಸ್ಥಳೀಯ

ಸೋಮಶೇಖರ್ ಕೊಯಿಂಗಾಜೆಯವರ ರಾಜೀನಾಮೆ ಅತೀವ ನೋವು ತಂದಿದೆ – ಮಹಮದ್ ಕುಂಞಿ ಗೂನಡ್ಕ

ತಳಮಟ್ಟದಿಂದ ಪಕ್ಷವನ್ನು ಕಟ್ಟಿಬೆಳೆಸಿದಂತಹ ನಾಯಕತ್ವ ಇನ್ನು ಮುಂದೆ ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುವುದು ಕಷ್ಟಸಾಧ್ಯ : ಮಹಮದ್ ಕುಂಞಿ ಗೂನಡ್ಕ

ಸೋಮಶೇಖರ್ ಕೊಯಿಂಗಾಜೆಯವರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವ ವಿಚಾರ ನನಗೆ ಅತ್ಯಂತ ದಿಗ್ಭ್ರಮೆ ಮತ್ತು ಆಳವಾದ ನೋವನ್ನುಂಟುಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮದ್ ಕುಂಞಿ ಗೂನಡ್ಕ ಅವರು ತಿಳಿಸಿದ್ದಾರೆ.
ಸೋಮಶೇಖರ್ ಅವರು ಕಳೆದ 28 ವರ್ಷಗಳಿಂದ ಸಂಪಾಜೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಪಕ್ಷದ ಏಳಿಗೆಗಾಗಿ ಅಪಾರ ಶ್ರಮವನ್ನು ವಹಿಸಿದ್ದಾರೆ. ಇಂತಹ ಅನುಭವೀ ಹಾಗೂ ಸಮರ್ಪಿತ ನಾಯಕರು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ನನಗೆ ಅತೀವ ದುಃಖವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು.
ನಾನು ಮತ್ತು ಸೋಮಶೇಖರ್ ಕೊಯಿಂಗಾಜೆಯವರು ಕಾರ್ಯಕರ್ತರೊಂದಿಗೆ ಕೈಜೋಡಿಸಿ ಪಕ್ಷವನ್ನು ಕಟ್ಟಿಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ನಾವು ಹಲವಾರು ತ್ಯಾಗಗಳನ್ನು ಸಹ ಮಾಡಿದ್ದೇವೆ ಎಂದು ಅವರು ಸ್ಮರಿಸಿದರು.
ಬಹುಸಂಖ್ಯಾತರ ಪ್ರಬಲ ಸಮುದಾಯದ ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿರುವ ಸೋಮಶೇಖರ್ ಕೊಯಿಂಗಾಜೆಯವರು ಸಹಕಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಉನ್ನತ ಹುದ್ದೆಗಳ ಅವಕಾಶಗಳಿದ್ದರೂ ಅವುಗಳನ್ನು ತಿರಸ್ಕರಿಸಿ ಸಂಪಾಜೆಯಲ್ಲೇ ನಿಂತು ತಳಮಟ್ಟದಿಂದ ಪಕ್ಷವನ್ನು ಕಟ್ಟಿಬೆಳೆಸಿದಂತಹ ನಾಯಕತ್ವ ಇನ್ನು ಮುಂದೆ ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುವುದು ಕಷ್ಟಸಾಧ್ಯ ಎಂದು ಮಹಮದ್ ಕುಂಞಿ ಗೂನಡ್ಕ ಅವರು ಅಭಿಪ್ರಾಯಪಟ್ಟರು.

Related Posts