Featured, ಇತರೆ, ಸ್ಥಳೀಯ

ವಸತಿ ಪ್ರದೇಶಗಳಲ್ಲಿ ಅಡಿಕೆ ಗಾರ್ಬಲ್ ಅನಿವಾರ್ಯವೇ?

ವಸತಿ ಪ್ರದೇಶಗಳು ಬದುಕಿಗಾಗಿ — ಉದ್ಯಮಕ್ಕಾಗಿ ಅಲ್ಲ. ಆದರೂ ಇಂದು  ಗ್ರಾಮ–ಪಟ್ಟಣಗಳಲ್ಲಿ ಮನೆಗಳ ನಡುವೆ ಅಡಿಕೆ ಗಾರ್ಬಲ್‌ಗಳು ತಲೆಎತ್ತುತ್ತಿದ್ದು, “ಇದು ಅನಿವಾರ್ಯವೇ?” ಅಥವಾ ಸಕ್ರಮವೇ ? ಎಂಬ ಪ್ರಶ್ನೆ ಸಾಮಾನ್ಯರ ಮನಸ್ಸಿನಲ್ಲಿ ಮೂಡುತ್ತಿದೆ.!!!

ಅಡಿಕೆ ಗಾರ್ಬಲ್‌ಗಳು ಕೃಷಿಕರ ಜೀವನೋಪಾಯಕ್ಕೆ ಅಗತ್ಯವೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಅದೇ ಗಾರ್ಬಲ್‌ಗಳು ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದಾಗ, ಹೊಗೆ, ಧೂಳು, ಶಬ್ದ ಮತ್ತು ದುರ್ವಾಸನೆಯ ಮೂಲಕ ಮಕ್ಕಳ, ವೃದ್ಧರ ಹಾಗೂ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಉಸಿರಾಟದ ತೊಂದರೆ, ಅಲರ್ಜಿಗಳು, ನಿದ್ರಾಭಂಗ, ಮನಸ್ಸಿನ ಅಶಾಂತಿ — ಇವು ಕೇವಲ ದೂರುಗಳಲ್ಲ, ಬದುಕಿನ ನಿತ್ಯದ ವಾಸ್ತವಗಳು. ಇಲ್ಲಿಯ ಪ್ರಶ್ನೆ  “ಗಾರ್ಬಲ್ ಬೇಕೇ?” ಎಂಬುದಲ್ಲ, ಗಾರ್ಬಲ್ ಎಲ್ಲಿರಬೇಕು?” ಎಂಬುದಾಗಿದೆ. ಉದ್ಯಮ ಮತ್ತು ವಸತಿ ಎರಡಕ್ಕೂ ಸಮತೋಲನ ಅಗತ್ಯ. ಗಾರ್ಬಲ್‌ಗಳಿಗೆ ಪ್ರತ್ಯೇಕ ಕೈಗಾರಿಕಾ ವಲಯ, ವೈಜ್ಞಾನಿಕ ತಂತ್ರಜ್ಞಾನ, ಪರಿಸರ ನಿಯಂತ್ರಣ ಕ್ರಮಗಳು ಮತ್ತು ಕಟ್ಟುನಿಟ್ಟಿನ ನಿಯಮಗಳು ಅನಿವಾರ್ಯ. ನಿಯಮವಿಲ್ಲದ ಗಾರ್ಬಲ್‌ಗಳು ಲಾಭ ಕೊಡಬಹುದಾದರೂ, ಅದರ ಬೆಲೆ ಆರೋಗ್ಯ ಮತ್ತು ಮಾನವೀಯತೆಯಾಗಬಾರದು. ಮಾನವೀಯ ದೃಷ್ಟಿಕೋನದಿಂದ ನೋಡಿದರೆ, ಒಬ್ಬರ ಜೀವನೋಪಾಯ ಮತ್ತೊಬ್ಬರ ಜೀವನದ ಗುಣಮಟ್ಟವನ್ನು ಕಸಿದುಕೊಳ್ಳಬಾರದು.ಅಭಿವೃದ್ಧಿ ಎಂದರೆ ಕೇವಲ ಆದಾಯವಲ್ಲ — ಆರೋಗ್ಯ, ಶಾಂತಿ ಮತ್ತು ಗೌರವದೊಂದಿಗೆ ಬದುಕುವುದು.

ವಸತಿ ಪ್ರದೇಶಗಳಲ್ಲಿ ಅಡಿಕೆ ಗಾರ್ಬಲ್‌ ಘಟಕಗಳು: ರಾಜ್ಯದ ಕಾನೂನು ಏನು ಹೇಳುತ್ತದೆ?

ವಸತಿ ಪ್ರದೇಶಗಳಲ್ಲಿ ಅಡಿಕೆ ಗಾರ್ಬಲ್‌ (Areca Nut Garbling) ಘಟಕಗಳನ್ನು ನಡೆಸುತ್ತಿರುವ ಬಗ್ಗೆ ರಾಜ್ಯದ ವಿವಿಧ ಭಾಗಗಳಿಂದ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆ, ಈ ಸಂಬಂಧ ರಾಜ್ಯದ ಕಾನೂನು ವ್ಯವಸ್ಥೆ ಸ್ಪಷ್ಟ ನಿಯಮಗಳನ್ನು ಹೊಂದಿದೆ.
ರಾಜ್ಯದ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ ಹಾಗೂ ಪುರಸಭೆ–ಪಂಚಾಯತ್ ಕಾಯ್ದೆಗಳ ಪ್ರಕಾರ, ವಸತಿ (Residential) ಪ್ರದೇಶಗಳನ್ನು ಕೈಗಾರಿಕಾ ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಅಡಿಕೆ ಗಾರ್ಬಲ್‌ ಘಟಕಗಳು ಧೂಳು, ಶಬ್ದ ಹಾಗೂ ತ್ಯಾಜ್ಯವನ್ನು ಉಂಟುಮಾಡುವ ಕಾರಣ ಇವುಗಳನ್ನು ಸಣ್ಣ ಸಂಸ್ಕರಣಾ ಕೈಗಾರಿಕೆಗಳಾಗಿ ಪರಿಗಣಿಸಲಾಗುತ್ತದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನಿಯಮಗಳಂತೆ, ಯಾವುದೇ ಅಡಿಕೆ ಗಾರ್ಬಲ್‌ ಘಟಕ ಸ್ಥಾಪನೆಗೆ ಮುನ್ನ Consent for Establishment (CFE) ಹಾಗೂ ಕಾರ್ಯಾಚರಣೆಗೆ Consent for Operation (CFO) ಪಡೆಯುವುದು ಕಡ್ಡಾಯವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ವಸತಿ ಪ್ರದೇಶಗಳಲ್ಲಿ ಇಂತಹ ಘಟಕಗಳನ್ನು ನಡೆಸುವುದು ಕಾನೂನುಬಾಹಿರವಾಗಿದೆ.
ಇದಲ್ಲದೆ, ಗ್ರಾಮ ಪಂಚಾಯತ್, ಪುರಸಭೆ ಅಥವಾ ನಗರ ಪಾಲಿಕೆಯಿಂದ ವ್ಯಾಪಾರ ಪರವಾನಗಿ ಪಡೆಯದೆ ಗಾರ್ಬಲ್‌ ಘಟಕಗಳನ್ನು ನಡೆಸಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ಘಟಕವನ್ನು ಮುಚ್ಚಿಸುವ ಅಧಿಕಾರವಿದೆ. ಸಾರ್ವಜನಿಕರಿಗೆ ಶಬ್ದ, ಧೂಳು ಅಥವಾ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಲು ಕಾನೂನು ಅವಕಾಶ ನೀಡಿದೆ.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ವಸತಿ ಪ್ರದೇಶಗಳಲ್ಲಿ ನಿರ್ದಿಷ್ಟ ಶಬ್ದ ಮಿತಿಯನ್ನು ಮೀರುವಂತಿಲ್ಲ. ಗಾರ್ಬಲ್‌ ಯಂತ್ರಗಳಿಂದ ಶಬ್ದ ಮಿತಿ ಮೀರಿದರೆ ದಂಡ ವಿಧಿಸುವುದಲ್ಲದೆ ಘಟಕದ ಕಾರ್ಯಾಚರಣೆ ನಿಲ್ಲಿಸುವಂತೆ ಆದೇಶ ನೀಡಬಹುದು.
ಕಾನೂನು ತಜ್ಞರ ಅಭಿಪ್ರಾಯದಂತೆ, ವಸತಿ ಪ್ರದೇಶಗಳಲ್ಲಿ ಅಡಿಕೆ ಗಾರ್ಬಲ್‌ ಘಟಕಗಳನ್ನು ನಡೆಸಲು ವಲಯ (Zone) ಪರಿವರ್ತನೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಹಾಗೂ ಸ್ಥಳೀಯ ಸಂಸ್ಥೆಯ ಪರವಾನಗಿ ಇಲ್ಲದೆ ಅವಕಾಶವಿಲ್ಲ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ದಂಡ, ಘಟಕ ಸೀಲಿಂಗ್ ಹಾಗೂ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.

Related Posts