ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸುಳ್ಯ ತಾಲೂಕು ಹಾಗೂ ಖೇಲೊ ಭಾರತ್ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಆಜಾದ್ ಟ್ರೋಫಿ ವಾಲಿಬಾಲ್ ಪಂದ್ಯಾಟವು ಫೆಬ್ರವರಿ 15ರಂದು ನಡೆಯಲಿದೆ.
ಈ ಸಂಬಂಧ ಕರಪತ್ರ ಹಾಗೂ ಟೀ-ಶರ್ಟ್ ಬಿಡುಗಡೆ ಕಾರ್ಯಕ್ರಮವು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಬಿವಿಪಿ ಪ್ರಮುಖರು, ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದು, ಪಂದ್ಯಾಟದ ಯಶಸ್ಸಿಗೆ ಶುಭಾಶಯ ಕೋರಿದರು.
ವಾಲಿಬಾಲ್ ಪಂದ್ಯಾಟವು ಫೆಬ್ರವರಿ 15, ಆದಿತ್ಯವಾರದಂದು ಸುಳ್ಯದ ಜೆಒಸಿ ಮೈದಾನದಲ್ಲಿ ನಡೆಯಲಿದ್ದು, ತಾಲೂಕಿನ ವಿವಿಧ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಹಾಗೂ ಪ್ರತಿಭೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.


