ಯೂನಿಯನ್ ಬ್ಯಾಂಕ್ ಚಲನ್ ದುರ್ಬಳಕೆ; ಇಬ್ಬರು ಆರೋಪಿಗಳ ಬಂಧನ – ಇ-ಸ್ವೀಕೃತಿ ವ್ಯವಸ್ಥೆಯಲ್ಲಿ ಅಕ್ರಮ ಬಯಲು
ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಬ್ಯಾಂಕ್ ಸೀಲ್ ಬಳಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು 76 ಬಡಗಬೆಟ್ಟು ನಿವಾಸಿ ಸುಪೇಶ್ (25) ಹಾಗೂ ಮೂಡುಅಲೆವೂರು ನಿವಾಸಿ ಶಾಂತಾ (43) ಅವರನ್ನು ಬಂಧಿಸಿದ್ದಾರೆ. ಸುಪೇಶ್ ಬ್ಯಾಂಕಿನಲ್ಲಿ ಹಾಗೂ ಶಾಂತಾ ಅವರು ನಗರಸಭೆಯ ಆಸ್ತಿ ತೆರಿಗೆ ವಸೂಲಾತಿ ಕೆಲಸವನ್ನು ಉಪಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದರು.
ನಗರಸಭೆಯ ಇ-ಸ್ವೀಕೃತಿ ವ್ಯವಸ್ಥೆಯಡಿ ಆಸ್ತಿ ತೆರಿಗೆಯನ್ನು ಚಲನ್ ಮೂಲಕ ಯೂನಿಯನ್ ಬ್ಯಾಂಕ್‌ನಲ್ಲಿ ಪಾವತಿಸಬೇಕಾಗುತ್ತದೆ. ಫೆಬ್ರವರಿ 3ರಂದು ಪೌರಾಯುಕ್ತ ಮಹಾಂತೇಶ್ ಅವರು ತೆರಿಗೆ ಪಾವತಿಗಳ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಈ ಅಕ್ರಮದ ಸುಳಿವು ಸಿಕ್ಕಿದೆ. ಜನವರಿ 28ರಂದು ಪಾವತಿಯಾಗಿದೆ ಎಂದು ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾಗಿದ್ದರೂ, ಬ್ಯಾಂಕಿನ ಅಧಿಕೃತ ವಹಿವಾಟು ಪಟ್ಟಿಯಲ್ಲಿ (Statement) ಆ ಹಣ ಜಮಾ ಆಗಿರಲಿಲ್ಲ.
ಮರುದಿನ ಅಂದರೆ ಫೆಬ್ರವರಿ 4ರಂದು ನಡೆಸಿದ ಹೆಚ್ಚಿನ ತಪಾಸಣೆಯಲ್ಲಿ, ಒಂದೇ ಚಲನ್ ಸಂಖ್ಯೆಯನ್ನು ಹೊಂದಿರುವ ಎರಡು ಬೇರೆ ಬೇರೆ ದಿನಾಂಕಗಳ ಸೀಲ್ ಇರುವ ಚಲನ್‌ಗಳು ಪತ್ತೆಯಾಗಿವೆ. ಬ್ಯಾಂಕ್ ಸೀಲ್ ಅನ್ನು ನಕಲು ಮಾಡಿ ಅಥವಾ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಪಡೆದ ಹಣವನ್ನು ಪಾಲಿಕೆಗೆ ಪಾವತಿಸದೆ ವಂಚಿಸುತ್ತಿರುವುದು ಖಚಿತವಾಗಿದೆ.
ಈ ಸಂಬಂಧ ಪೌರಾಯುಕ್ತರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ (ಅಪರಾಧ ಕ್ರಮಾಂಕ 207/2025) ಪ್ರಕರಣ ದಾಖಲಾಗಿತ್ತು ಇದೀಗ ಇಬ್ಬರ ಬಂಧನವಾಗಿದೆ ಪೊಲೀಸರು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.


