ಮಾಜಿ ಎಪಿಎಂಸಿ ಸದಸ್ಯ ಸೇರಿದಂತೆ ಮೂವರು ಮೃತ್ಯು, ಮತ್ತೊಬ್ಬರ ಸ್ಥಿತಿ ಗಂಭೀರ
ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಗುಡಿ ದೇವಸ್ಥಾನದ ಸಮೀಪ ಶುಕ್ರವಾರ ಅಪರಾಹ್ನ ಕೆಎಸ್ಸಾರ್ಟಿಸಿ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಸಕಲೇಶಪುರದಿಂದ ಕೊಕ್ಕಡ ಕಡೆಗೆ ಬರುತ್ತಿದ್ದ ಶಿಶಿಲ ಗ್ರಾಮದ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ ಅವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮತ್ತು ಧರ್ಮಸ್ಥಳದಿಂದ ತಿರುಪತಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ರಾಜಹಂಸ ಬಸ್ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಬೆಳ್ತಂಗಡಿ ಭಾಗದವರು ಎಂದು ಗುರುತಿಸಲಾಗಿದ್ದು, ಮಾಜಿ ಎಪಿಎಂಸಿ ಸದಸ್ಯರಾದ ಚಂದ್ರಶೇಖರ ಶಿಶಿಲ, ಜನಾರ್ದನ ಗೌಡ (ಕೇರಿಮಾರ್, ಉಜಿರೆ) ಹಾಗೂ ಕಕ್ಕಿಂಜೆ ಫೈನಾನ್ಸ್‌ನ ಶ್ರೀಧರ ಗೌಡ (ಮರಕಡ ಅರಳಿ) ಮೃತಪಟ್ಟವರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕಾರಿನಲ್ಲಿ ಇದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ (ಉಜಿರೆ) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

