ಅಮೆರಿಕ ಆರೋಪಗಳಿಗೆ ಇರಾನ್ ಪ್ರತಿಕ್ರಿಯೆ
ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂಬ ಅಮೆರಿಕದ ಆರೋಪಗಳನ್ನು ಇರಾನ್ ತಳ್ಳಿ ಹಾಕಿದ್ದು, ಅದು ಜಗತ್ತಿನ ವ್ಯಾಪಾರ ಸಾಗಣೆಗೆ ಮುಚ್ಚಲಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ, ಜಲಸಂಧಿಯನ್ನು ಸಾಮಾನ್ಯ ಅಂತರರಾಷ್ಟ್ರೀಯ ಸಾಗಣೆಗೆ ಮುಚ್ಚಿಲ್ಲ, ಆದರೆ ಅಮೆರಿಕ ಮತ್ತು ಇಸ್ರೇಲಿ ಹಡಗುಗಳಿಗೆ ಮಾತ್ರ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇರಾನ್ ಜಗತ್ತಿನ ವಿರುದ್ಧ ಸಂಘರ್ಷ ನಡೆಸುತ್ತಿದೆ ಎಂಬ ರೀತಿಯಲ್ಲಿ ಪರಿಸ್ಥಿತಿಯನ್ನು ತೋರಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಇದಲ್ಲದೆ, ಗಲ್ಫ್ ರಾಷ್ಟ್ರಗಳು ತಮ್ಮ ಪ್ರದೇಶವನ್ನು ಬಳಸಿ ಅಮೆರಿಕ ಇರಾನ್ ವಿರುದ್ಧ ದಾಳಿ ನಡೆಸಲು ಅವಕಾಶ ನೀಡಬಾರದು ಎಂದು ಅವರು ಸೂಚಿಸಿದರು. ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಅಥವಾ ಜಗತ್ತಿನ ಇತರ ದೇಶಗಳೊಂದಿಗೆ ಸಂಘರ್ಷ ನಡೆಸುವ ಉದ್ದೇಶ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

