Featured, ಇತರೆ, ಸ್ಥಳೀಯ

ಪತ್ರಕರ್ತ, ವಾರ್ತಾಭಾರತಿಯ ಸಂಶುದ್ದೀನ್ ಎಣ್ಮೂರುಗೆ ದತ್ತಿನಿಧಿ ಪ್ರಶಸ್ತಿ

ಮೇ 16ರಂದು ಕಾಸರಗೋಡಿನಲ್ಲಿ ಪ್ರದಾನ; ಪತ್ರಿಕಾ ಕ್ಷೇತ್ರದ ಸಾಧನೆಗೆ ಗೌರವ

ಕಾಸರಗೋಡು, ಎ.30: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ನೀಡುವ ವಾರ್ಷಿಕ ‘ದತ್ತಿನಿಧಿ ಪ್ರಶಸ್ತಿ’ಗೆ ವಾರ್ತಾಭಾರತಿಯ ಪತ್ರಕರ್ತ ಸಂಶುದ್ದೀನ್ ಎಣ್ಮೂರು ಆಯ್ಕೆಯಾಗಿದ್ದಾರೆ.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪತ್ರಕರ್ತರ ಹಿತರಕ್ಷಣೆಗಾಗಿ ಕಳೆದ ಎರಡು ದಶಕಗಳಿಂದ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು, ದುಬೈ ಮೂಲದ ಉದ್ಯಮಿ ಜೇಮ್ಸ್ ಮೆಂಡೋನ್ಸಾ ಅವರ ಪ್ರಾಯೋಜಕತ್ವದಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ.
ಪ್ರಶಸ್ತಿಯಲ್ಲಿ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಮೇ 16ರಂದು ಬೆಳಗ್ಗೆ 9 ಗಂಟೆಗೆ ಕಾಸರಗೋಡು ಜಿಲ್ಲೆಯ ಸುಬ್ಬಯ್ಯಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮವು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವ ಎನ್.ಎಸ್. ಬೋಸರಾಜು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇನ್ನು, ಸಂಶುದ್ದೀನ್ ಎಣ್ಮೂರು ಅವರು 2021ರ ಸೆಪ್ಟೆಂಬರ್ 7ರಂದು ಪ್ರಕಟವಾದ “ಕೊರಗುತ್ತಿರುವ ಕೊರಗರ ಬದುಕು” ಎಂಬ ವಿಶೇಷ ವರದಿಗೆ ಈಗಾಗಲೇ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2022-23ನೇ ಸಾಲಿನ ಅತ್ಯುತ್ತಮ ಗ್ರಾಮೀಣ ವರದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿಗೂ ಭಾಜನರಾಗಿರುವುದು ಗಮನಾರ್ಹವಾಗಿದೆ.

m

Related Posts