ಬೋಟಿಂಗ್ ವೇಳೆ ದೋಣಿ ಮಗುಚಿ ಅವಘಡ; ಸುರಕ್ಷತಾ ಕ್ರಮಗಳ ಕೊರತೆಯೇ ದುರಂತಕ್ಕೆ ಕಾರಣ, ಪ್ರವಾಸಿಗರ ಭದ್ರತೆ ಕುರಿತು ಗಂಭೀರ ಪ್ರಶ್ನೆ
ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಬರ್ಗಿ ಅಣೆಕಟ್ಟಿನ ಹಿನ್ನೀರಿನಲ್ಲಿ ಜಲಕ್ರೀಡೆ ಮತ್ತು ಬೋಟಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ದೋಣಿ ಮಗುಚಿ ಭೀಕರ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ತಾಯಿ ತನ್ನ ಮಗು ಎದೆಗಪ್ಪಿಕೊಂಡೇ ಪ್ರಾಣ ಬಿಟ್ಟಿರುವ ಘಟನೆ ಎಲ್ಲರ ಹೃದಯ ಕಲುಕುವಂತಾಗಿದೆ.
ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಪ್ರವಾಸಿಗರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಿದರೂ, ನೀರಿನ ಪ್ರಬಲ ಸೆಳೆತದಿಂದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ. ದೋಣಿಯಲ್ಲಿದ್ದ ಇತರರನ್ನು ಸ್ಥಳೀಯರ ಸಹಾಯದಿಂದ ದಡಕ್ಕೆ ತಲುಪಿಸಲಾಯಿತು.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಪಡೆಗಳು ತಕ್ಷಣ ಆಗಮಿಸಿ, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡರು. ಆದರೆ ನೀರಿನಲ್ಲಿ ಮುಳುಗುತ್ತಿದ್ದವರನ್ನು ಉಳಿಸಲು ಮಾಡಿದ ಪ್ರಯತ್ನಗಳು ವಿಫಲವಾಗುತ್ತಿದ್ದಂತೆ, ದಡದಲ್ಲಿದ್ದ ಕುಟುಂಬ ಸದಸ್ಯರ ಆಕ್ರಂದನ ಅರಣ್ಯರೋದನವಾಗಿತ್ತು.
ಈ ದುರಂತದಲ್ಲಿ ಅತ್ಯಂತ ನೋವುಂಟುಮಾಡುವ ಸಂಗತಿಯೆಂದರೆ, ಬೋಟಿಂಗ್ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಕೊರತೆ. ಈ ನಿರ್ಲಕ್ಷ್ಯವೇ ತಾಯಿ ಹಾಗೂ ಕೇವಲ ಆರು ವರ್ಷದ ಪುಟ್ಟ ಬಾಲಕನ ಪ್ರಾಣ ಕಸಿದುಕೊಂಡಿದೆ.
ತಾಯಿ ತನ್ನ ಮಗುವನ್ನು ಎದೆಗಪ್ಪಿಕೊಂಡೇ ಕೊನೆಯುಸಿರು ಬಿಟ್ಟ ದೃಷ್ಯವನ್ನು ಕಂಡು ಅಲ್ಲಿದ್ದ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಈ ಘಟನೆ ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಯನ್ನು ಎಬ್ಬಿಸಿದೆ.





m
