Featured, ಇತರೆ, ಸ್ಥಳೀಯ

ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘನೆ: ಎಕ್ಸ್‌ಪರ್ಟ್ ಕಾಲೇಜುಗಳ ಅಧ್ಯಕ್ಷ ನರೇಂದ್ರ ನಾಯಕ್‌ಗೆ ದಂಡ

ಮಂಗಳೂರು, ಮೇ 29: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ 2021ರಲ್ಲಿ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ವಳಚ್ಚಿಲ್‌ನ ಎಕ್ಸ್‌ಪರ್ಟ್ ಕಾಲೇಜುಗಳ ಸಮೂಹದ ಅಧ್ಯಕ್ಷ ನರೇಂದ್ರ ನಾಯಕ್ ಅವರಿಗೆ ಮಂಗಳೂರಿನ ನ್ಯಾಯಾಲಯ ದಂಡ ವಿಧಿಸಿದೆ.
ಮಂಗಳೂರಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ಇ.ಎಸ್. ಸುರೇಶ್ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆ ನರೇಂದ್ರ ನಾಯಕ್ ಅವರಿಗೆ ₹6,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಏಳು ದಿನಗಳ ಸರಳ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.
2021ರಲ್ಲಿ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಶಾಲೆ ಮತ್ತು ಕಾಲೇಜುಗಳನ್ನು ಬಂದ್ ಮಾಡಿ ಆನ್‌ಲೈನ್ ಮೂಲಕ ತರಗತಿ ನಡೆಸುವಂತೆ ಆದೇಶಿಸಿದ್ದರು. ಆದರೂ ವಳಚ್ಚಿಲ್‌ನ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ಉಳಿಸಿಕೊಂಡು ತರಗತಿ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಇದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿಗಳ ಪೋಷಕರು 2021ರ ಜುಲೈ 29ರಂದು ಕಾಲೇಜು ಆವರಣಕ್ಕೆ ಆಗಮಿಸಿದ್ದರು. ಸುಮಾರು 30ಕ್ಕೂ ಹೆಚ್ಚು ಪೋಷಕರು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನದವರೆಗೆ ಕಾಲೇಜು ಗೇಟ್ ಹೊರಗಡೆ ಗುಂಪಾಗಿ ನಿಂತಿದ್ದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಮಾಹಿತಿ ಪಡೆದ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದರು. ಆಗಿನ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ ಅವರು ತನಿಖೆ ನಡೆಸಿ, ಕಾಲೇಜು ಸಂಸ್ಥೆಗಳ ಅಧ್ಯಕ್ಷ ನರೇಂದ್ರ ನಾಯಕ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ವಿಚಾರಣೆ ವೇಳೆ ಪೊಲೀಸರು ಸ್ಥಳದ ಫೋಟೋ ಹಾಗೂ ವಿಡಿಯೋ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದಲ್ಲದೆ, ಲಾಕ್‌ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ ಸರ್ಕಾರದ ಆದೇಶ ಉಲ್ಲಂಘಿಸಿದ ಕಾರಣಕ್ಕೆ ಪ್ರತ್ಯೇಕವಾಗಿ ₹1,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಎರಡು ದಿನಗಳ ಸರಳ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
m

Related Posts