ವಿಶ್ವದ ಮೂಲೆ ಮೂಲೆಗಳಿಂದ ಲಕ್ಷಾಂತರ ಮುಸ್ಲಿಂ ಹಜ್ ಯಾತ್ರಿಕರು ಒಂದೇ ಸ್ಥಳದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುವ ಈ ಮಹಾಯಾತ್ರೆ, ಇಸ್ಲಾಂ ಧರ್ಮದ ಏಕತೆ, ಶಾಂತಿ ಮತ್ತು ಸಮರ್ಪಣೆಯ ಪ್ರತೀಕವಾಗಿ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.
ಮಕ್ಕಾ, ಮೇ 30: ಹಜ್ 2026 ಯಾತ್ರೆಗೆ ಆಗಮಿಸಿದ ಯಾತ್ರಿಕರ ಸಂಖ್ಯೆ 17 ಲಕ್ಷದ ಗಡಿ ದಾಟಿದ್ದು, ಈ ಬಾರಿ ವಿಶ್ವದ ವಿವಿಧ ದೇಶಗಳಿಂದ ಭಾರಿ ಸಂಖ್ಯೆಯಲ್ಲಿ ಮುಸ್ಲಿಂ ಹಜ್ ಯಾತ್ರಿಕರು ಆಗಮಿಸಿದ್ದಾರೆ.
ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಗಳ ಪ್ರಕಾರ, ಇದುವರೆಗೆ ಒಟ್ಟು 17,07,301 ಮಂದಿ ಹಜ್ ಯಾತ್ರೆಗೆ ಆಗಮಿಸಿದ್ದಾರೆ. ಇವರಲ್ಲಿ 15,46,655 ಮಂದಿ ಅಂತರರಾಷ್ಟ್ರೀಯ ಯಾತ್ರಿಕರು ಹಾಗೂ 1,60,646 ಮಂದಿ ದೇಶೀಯ ಯಾತ್ರಿಕರು ಸೇರಿದ್ದಾರೆ.
ಒಟ್ಟು ಯಾತ್ರಿಕರಲ್ಲಿ 8,93,396 ಮಂದಿ ಪುರುಷರು ಹಾಗೂ 8,13,905 ಮಂದಿ ಮಹಿಳೆಯರು ಇದ್ದು, ಈ ಬಾರಿಯ ಹಜ್ ಯಾತ್ರೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಿರುವುದು ಸ್ಪಷ್ಟವಾಗಿದೆ.
ವಿದೇಶಗಳಿಂದ ಆಗಮಿಸಿದ ಯಾತ್ರಿಕರಲ್ಲಿ ಹೆಚ್ಚಿನವರು ವಿಮಾನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂಕಿಅಂಶಗಳ ಪ್ರಕಾರ 14,85,729 ಮಂದಿ ವಿಮಾನದ ಮೂಲಕ, 54,429 ಮಂದಿ ರಸ್ತೆ ಮಾರ್ಗದ ಮೂಲಕ ಹಾಗೂ 6,497 ಮಂದಿ ಸಮುದ್ರ ಮಾರ್ಗದ ಮೂಲಕ ಸೌದಿ ಅರೇಬಿಯಾಕ್ಕೆ ಪ್ರವೇಶಿಸಿದ್ದಾರೆ.
ಪ್ರತಿ ವರ್ಷ ವಿಶ್ವದ ಮೂಲೆ ಮೂಲೆಗಳಿಂದ ಲಕ್ಷಾಂತರ ಮುಸ್ಲಿಂ ಭಕ್ತರು ಒಂದೇ ಸ್ಥಳದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುವ ಹಜ್ ಮಹಾಯಾತ್ರೆ, ಇಸ್ಲಾಂ ಧರ್ಮದ ಏಕತೆ, ಶಾಂತಿ ಮತ್ತು ಸಮರ್ಪಣೆಯ ಪ್ರತೀಕವಾಗಿ ಜಗತ್ತಿನ ಗಮನ ಸೆಳೆಯುತ್ತದೆ. ಈ ಬಾರಿಯೂ ಭಕ್ತಿಭಾವ, ಶಿಸ್ತು ಹಾಗೂ ಸಹೋದರತ್ವದ ಸಂದೇಶದೊಂದಿಗೆ ಹಜ್ ಯಾತ್ರೆ ವಿಶೇಷ ಮಹತ್ವ ಪಡೆದಿದೆ.





m
