ನವದೆಹಲಿ, ಜೂನ್ 2: ದೇಶದ ವಿವಿಧ ರಾಷ್ಟ್ರೀಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಡೆದಿರುವ ಅವ್ಯವಸ್ಥೆ ಮತ್ತು ದೋಷಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6ರಂದು ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಸೋಮವಾರ ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವೀಡಿಯೊ ಮೂಲಕ ಈ ವಿಷಯವನ್ನು ಪ್ರಕಟಿಸಿದ ದೀಪ್ಕೆ, ತಮ್ಮ ಬೆಂಬಲಿಗರು ಮತ್ತು ವಿದ್ಯಾರ್ಥಿಗಳನ್ನು ದೆಹಲಿಗೆ ಸೇರಿಕೊಳ್ಳುವಂತೆ ಕರೆ ನೀಡಿದ್ದಾರೆ.
“ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಗ್ಗೂಡಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ. ನಾವು ಒಂದಾಗಿ ನಿಂತರೆ ಸರ್ಕಾರ ನಮ್ಮ ಮಾತು ಕೇಳಲೇಬೇಕು” ಎಂದು ಅವರು ಹೇಳಿದ್ದಾರೆ.
ನೀಟ್ (NEET), ಸಿಬಿಎಸ್ಇ (CBSE), ಸಿಯುಇಟಿ (CUET) ಮತ್ತು ಎಸ್ಎಸ್ಸಿಜಿಡಿ (SSCGD) ಪರೀಕ್ಷೆಗಳ ಸುತ್ತಲಿನ ವಿವಾದಗಳನ್ನು ಉಲ್ಲೇಖಿಸಿದ ಅವರು, ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಮರುಮರು ಕಾಣಿಸುತ್ತಿರುವ ವೈಫಲ್ಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಆರೋಪಿಸಿದರು.
“NEETನ 22 ಲಕ್ಷ, CBSEಯ 17 ಲಕ್ಷ, CUETನ 16 ಲಕ್ಷ ಮತ್ತು SSCGDಯ 40 ಲಕ್ಷ ವಿದ್ಯಾರ್ಥಿಗಳು ಸೇರಿ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳ ಬದುಕಿನ ಮೇಲೆ ಈ ಅವ್ಯವಸ್ಥೆ ಪರಿಣಾಮ ಬೀರಿದೆ. ಇದರಿಂದ ವಿದ್ಯಾರ್ಥಿಗಳು ಆತಂಕದಲ್ಲಿದ್ದು, ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಇದಕ್ಕೆ ಯಾರಾದರೂ ಹೊಣೆ ಹೊತ್ತು ಉತ್ತರಿಸಲೇಬೇಕು” ಎಂದು ದೀಪ್ಕೆ ಅಭಿಪ್ರಾಯಪಟ್ಟರು.
“ಇಷ್ಟು ದೊಡ್ಡ ಪ್ರಮಾದಗಳ ಬಳಿಕವೂ ಶಿಕ್ಷಣ ಸಚಿವರು ರಾಜೀನಾಮೆ ನೀಡದಿದ್ದರೆ, ಈ ದೇಶದಲ್ಲಿ ಹೊಣೆಗಾರಿಕೆ ಎಂಬುದು ಉಳಿದಿಲ್ಲ ಎನ್ನುವುದೇ ಸತ್ಯ. ತಪ್ಪುಗಳ ಪರಿಣಾಮ ವಿದ್ಯಾರ್ಥಿಗಳ ಮೇಲೆಯೇ ಬೀಳುತ್ತಿದೆ” ಎಂದು ಅವರು ಹೇಳಿದರು.
ಜೂನ್ 6ರಂದು ಶನಿವಾರ ಬೆಳಗ್ಗೆ ದೆಹಲಿಗೆ ಆಗಮಿಸುವುದಾಗಿ ತಿಳಿಸಿದ ಅವರು, ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಬೆಂಬಲಿಗರು ಸೇರಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಬಳಿಕ ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳುವುದಾಗಿ ತಿಳಿಸಿದ್ದಾರೆ.
ಈ ಚಳುವಳಿ ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳ ಅಡಿಯಲ್ಲಿ ಕಾನೂನುಬದ್ಧವಾಗಿ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರ ನಡುವೆ, ತಮ್ಮ ಭಾರತ ಪ್ರವೇಶದ ಬಳಿಕ ಕಾನೂನು ಕ್ರಮ ಅಥವಾ ಬಂಧನ ಸಾಧ್ಯತೆಯ ಬಗ್ಗೆ ಕುಟುಂಬ ಸದಸ್ಯರು, ವಿಶೇಷವಾಗಿ ಪೋಷಕರು ಆತಂಕ ವ್ಯಕ್ತಪಡಿಸಿರುವುದನ್ನೂ ದೀಪ್ಕೆ ತಿಳಿಸಿದ್ದಾರೆ. ಆದರೂ, ದೇಶದ ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಅನುಗುಣವಾಗಿ ತಮ್ಮ ಪ್ರತಿಭಟನೆಗೆ ಅವಕಾಶ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.





m
