ಕೋಲ್ಕತ್ತಾ, ಜೂನ್ 21: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿರುವ ನಡುವೆ, ಅತೃಪ್ತ ಶಾಸಕರು ನೀಡಿದ ದೂರಿನ ಆಧಾರದ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳಲ್ಲಿ ಇರುವ ಸುಮಾರು ₹440 ಕೋಟಿ ಹಣವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ ಹೆಸರಿನಲ್ಲಿ ನಿರ್ವಹಿಸಲಾಗುತ್ತಿದ್ದ ಮೂರು ಬ್ಯಾಂಕ್ ಖಾತೆಗಳಲ್ಲಿ ಈ ಮೊತ್ತ ಜಮಾ ಆಗಿದ್ದು, ಅದರ ಮೂಲ ಹಾಗೂ ವಹಿವಾಟಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಪ್ರಭಾವದ ದುರುಪಯೋಗ, ಅಪ್ರಾಮಾಣಿಕ ಹಣಕಾಸು ವ್ಯವಹಾರಗಳು ಮತ್ತು ಅನುಮಾನಾಸ್ಪದ ಹಣ ವರ್ಗಾವಣೆಗಳ ಮೂಲಕ ಈ ಹಣ ಸಂಗ್ರಹವಾಗಿರಬಹುದೆಂಬ ಆರೋಪಗಳು ಕೇಳಿಬಂದಿವೆ.
ಇದರ ನಡುವೆಯೇ, ಪಕ್ಷದೊಳಗಿನ ಅಸಮಾಧಾನವೂ ಹೆಚ್ಚಾಗಿದೆ. 60 ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ನಾಯಕತ್ವದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ, ಪಕ್ಷದ ಒಳಜಗಳ ಶಮನವಾಗುವವರೆಗೆ ಹಣದ ವಹಿವಾಟನ್ನು ತಡೆಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ, “ಶಾಸಕರು ಸಲ್ಲಿಸಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಖಾತೆಗಳಲ್ಲಿ ಇರುವ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ. ಹಣದ ಮೂಲದ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿದೆ” ಎಂದು ತಿಳಿಸಿದ್ದಾರೆ.
ರಾಜಕೀಯ ಹಾಗೂ ಕಾನೂನು ವಲಯಗಳಲ್ಲಿ ಈ ಬೆಳವಣಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳ ನಿರೀಕ್ಷೆಯಿದೆ.





m

