ಸುಳ್ಯ, ಜು. 25: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ಸುಳ್ಯ ಡಿವಿಷನ್ ವತಿಯಿಂದ “Beyond the Binary” ಎಂಬ ಧ್ಯೇಯವಾಕ್ಯದಡಿ ಜುಲೈ 26ರಂದು ಬೆಳ್ಳಾರೆಯ ದಾರುಲ್ ಹಿಕ್ಮಾ ಆವರಣದಲ್ಲಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಅದ್ದೂರಿಯಾಗಿ ನಡೆಯಲಿದೆ.
ಕಳೆದ 50 ವರ್ಷಗಳಿಂದ “ಸಂಸ್ಕೃತಿ, ಸಮಾಜ, ಸ್ವಭಾವ” ಎಂಬ ಧ್ಯೇಯವಾಕ್ಯದೊಂದಿಗೆ ಯುವ ಸಮುದಾಯವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಎಸ್‌ಎಸ್‌ಎಫ್ ಮಹತ್ವದ ಪಾತ್ರ ವಹಿಸಿದೆ. 1989ರಲ್ಲಿ ಕರ್ನಾಟಕದಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಬಳಿಕ, ಕಳೆದ ಹಲವು ವರ್ಷಗಳಿಂದ ರಾಜ್ಯದಾದ್ಯಂತ ಸಾಹಿತ್ಯೋತ್ಸವಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿರುವ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ. ಈ ವರ್ಷದ ಸಾಹಿತ್ಯೋತ್ಸವವು “Beyond the Binary” ಎಂಬ ಧ್ಯೇಯವಾಕ್ಯದಡಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಹಾಗೂ ಬಹುಮುಖ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.

ಈ ಸಾಹಿತ್ಯೋತ್ಸವಕ್ಕಾಗಿ ಯೂನಿಟ್ ಮಟ್ಟದಲ್ಲಿ ಆಯ್ಕೆಯಾದ ಸ್ಪರ್ಧಿಗಳು ಸೆಕ್ಟರ್ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾಗಿ ಇದೀಗ ಡಿವಿಷನ್ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಸುಳ್ಯ ಡಿವಿಷನ್ ವ್ಯಾಪ್ತಿಯ ಬೆಳ್ಳಾರೆ, ಅಜ್ಜಾವರ ಹಾಗೂ ಸುಳ್ಯ ಸೆಕ್ಟರ್‌ಗಳ ನಡುವೆ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಪ್ರತಿಭೆಗಳು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ.
ನಾಳೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೂರು ಸೆಕ್ಟರ್‌ಗಳ ವ್ಯಾಪ್ತಿಯ 21 ಯೂನಿಟ್‌ಗಳಿಂದ 300ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಉಲಮಾ-ಉಮರಾ ನಾಯಕರು ಹಾಗೂ ಗಣ್ಯ ಅತಿಥಿಗಳು ಉಪಸ್ಥಿತರಿರುವರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಎಸ್‌ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ ಬೆಳ್ಳಾರೆ ಅವರು, “ಸುನ್ನಿ ವಿದ್ಯಾರ್ಥಿಗಳ ಅತ್ಯಂತ ದೊಡ್ಡ ಕಲಾ-ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬವಾಗಿ ಸಾಹಿತ್ಯೋತ್ಸವ ಗುರುತಿಸಿಕೊಂಡಿದೆ. 50 ವರ್ಷಗಳ ಇತಿಹಾಸ ಹೊಂದಿರುವ ಸಂಘಟನೆಯಾದ ಎಸ್‌ಎಸ್‌ಎಫ್ ಕಳೆದ ಹಲವು ವರ್ಷಗಳಿಂದ ಅನೇಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜಕ್ಕೆ ಉತ್ತಮ ನಾಯಕತ್ವ ಮತ್ತು ಸೇವಾ ಮನೋಭಾವದ ಯುವಕರನ್ನು ಸಮರ್ಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ” ಎಂದು ತಿಳಿಸಿದ್ದಾರೆ.




m
