Featured, ಸ್ಥಳೀಯ

ಮಡಾವು–ಬೆಳ್ಳಾರೆ ರಸ್ತೆಯಲ್ಲಿ ಬೃಹತ್ ಗುಂಡಿಗಳು: ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ನೆಟ್ಟಾರ್ ರಸ್ತೆ; ತುರ್ತು ದುರಸ್ತಿಗೆ ಫ್ರೆಂಡ್ಸ್ ಕ್ಲಬ್ ಆಗ್ರಹ

ರಸ್ತೆ ದುರಸ್ತಿ, ಬೀದಿ ದೀಪ, ಸಿಸಿಟಿವಿ ಹಾಗೂ ಜಂಕ್ಷನ್‌ನಲ್ಲಿ ಸುರಕ್ಷತಾ ವ್ಯವಸ್ಥೆಗೆ ಒತ್ತಾಯ

ಅಪಘಾತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ 

ನೆಟ್ಟಾರ್: ಮಡಾವು–ಬೆಳ್ಳಾರೆ ರಸ್ತೆಯ ನೆಟ್ಟಾರ್ ಭಾಗದಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಅಪಘಾತದ ಆತಂಕದಲ್ಲಿ ಸಂಚರಿಸುವಂತಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸುವಂತೆ ಫ್ರೆಂಡ್ಸ್ ಕ್ಲಬ್ ನೆಟ್ಟಾರ್ ಆಗ್ರಹಿಸಿದೆ.

ಮಳೆಗಾಲದಲ್ಲಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಅವುಗಳ ಆಳ ತಿಳಿಯದೆ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ. ವಿಶೇಷವಾಗಿ ಈ ಮಾರ್ಗದಲ್ಲಿ ಮೊದಲ ಬಾರಿಗೆ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಹದಗೆಟ್ಟ ರಸ್ತೆಗೆ ಶೀಘ್ರವೇ ಸಮರ್ಪಕ ಪ್ಯಾಚ್‌ವರ್ಕ್ ನಡೆಸಬೇಕೆಂದು ಒತ್ತಾಯಿಸಲಾಗಿದೆ.

ನೆಟ್ಟಾರ್ ಪ್ರದೇಶದಲ್ಲಿ ಬೀದಿ ದೀಪಗಳ ಕೊರತೆಯಿಂದ ರಾತ್ರಿ ವೇಳೆ ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಈ ಹಿಂದೆಯೇ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿದ್ದು, ಹೆಚ್ಚುವರಿ ಬೀದಿ ದೀಪಗಳನ್ನು ಅಳವಡಿಸುವಂತೆ ಮತ್ತೊಮ್ಮೆ ಆಗ್ರಹಿಸಲಾಗಿದೆ.

ಮೂರು ರಸ್ತೆ ಸೇರುವ ಜಂಕ್ಷನ್‌ನಲ್ಲಿ ಸುರಕ್ಷತಾ ವ್ಯವಸ್ಥೆಗೆ ಒತ್ತಾಯ

ನೆಟ್ಟಾರ್‌ನ ಪ್ರಮುಖ ಮೂರು ರಸ್ತೆಗಳು ಸೇರುವ ಜಂಕ್ಷನ್‌ನಲ್ಲಿ ವಾಹನಗಳ ಸಂಚಾರವನ್ನು ಸುಗಮಗೊಳಿಸುವುದರೊಂದಿಗೆ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಂಚಾರದ ಸ್ವರೂಪ ಹಾಗೂ ರಸ್ತೆ ಪರಿಸ್ಥಿತಿಯನ್ನು ಆಧರಿಸಿ ಸೂಕ್ತ ರಸ್ತೆ ವಿಭಜಕ (ಡಿವೈಡರ್), ಬ್ಯಾರಿಕೇಡ್ ಅಥವಾ ಇತರ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಲಾಗಿದೆ.

ಸಾರ್ವಜನಿಕ ಸುರಕ್ಷತೆಗೆ ಸಿಸಿಟಿವಿ ಅಳವಡಿಸಲು ಆಗ್ರಹ

ನೆಟ್ಟಾರ್‌ನ ಪ್ರಮುಖ ಜಂಕ್ಷನ್‌ಗಳು ಹಾಗೂ ಅಗತ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆಯೂ ಫ್ರೆಂಡ್ಸ್ ಕ್ಲಬ್ ಒತ್ತಾಯಿಸಿದೆ.

ಸಿಸಿಟಿವಿ ವ್ಯವಸ್ಥೆಯಿಂದ ಸಂಚಾರದ ಮೇಲ್ವಿಚಾರಣೆ, ಅಪಘಾತಗಳ ಸಂದರ್ಭಗಳ ಪರಿಶೀಲನೆ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ಅವುಗಳ ಕುರಿತು ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ವ್ಯವಸ್ಥೆ ಅಗತ್ಯವಾಗಿದೆ ಎಂದು ಕ್ಲಬ್ ಅಭಿಪ್ರಾಯಪಟ್ಟಿದೆ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಅಪಘಾತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು, ಮುನ್ನೆಚ್ಚರಿಕೆಯಾಗಿ ಈಗಲೇ ಕ್ರಮ ಕೈಗೊಳ್ಳಬೇಕು. ನೆಟ್ಟಾರ್‌ನ ಅಭಿವೃದ್ಧಿ ಮತ್ತು ಸಾರ್ವಜನಿಕರ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಫ್ರೆಂಡ್ಸ್ ಕ್ಲಬ್ ನೆಟ್ಟಾರ್ ತಿಳಿಸಿದೆ.

Related Posts