Featured, ಇತರೆ

ಸುಳ್ಯದಲ್ಲಿ ನ. 12ರಂದು ಉದ್ಯೋಗ ಮೇಳ | 37 ಕಂಪನಿಗಳ ನೋಂದಣಿ

ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿದಾರರನ್ನು ನೇರವಾಗಿಭೇಟಿಯಾಗುವ ಅವಕಾಶ

ಸುಳ್ಯ, ನ. 6: ಉದ್ಯೋಗಾವಕಾಶಗಳ ಮಾಹಿತಿ ಪಡೆಯುವುದು ಹಾಗೂ ನೇಮಕಾತಿದಾರರನ್ನು ನೇರವಾಗಿ ಸಂಪರ್ಕಿಸುವುದು ಉದ್ಯೋಗ ಹುಡುಕುತ್ತಿರುವವರ ಮುಂದಿರುವ ಸವಾಲುಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ನವೆಂಬರ್ 12ರಂದು ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈಗಾಗಲೇ ಸುಮಾರು 37 ಕಂಪನಿಗಳು ಮೇಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿವೆ.

ಶುಕ್ರವಾರ ನಡೆದ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮೇಳದ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಹಾಗೂ ತಾಲೂಕು ಪ್ರಾಧಿಕಾರದ ಅಧ್ಯಕ್ಷ ಪಿ.ಎಸ್. ಗಂಗಾಧರ್ ಮಾತನಾಡಿ, ಮೇಳ ಯಶಸ್ವಿಯಾಗಲು ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೇಳಕ್ಕೆ ಇನ್ನಷ್ಟು ಕಂಪನಿಗಳು ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಉದ್ಯೋಗ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. ಉದ್ಯೋಗಾಕಾಂಕ್ಷಿಗಳ ನೋಂದಣಿ, ಊಟೋಪಚಾರ ಮತ್ತು ಅತಿಥಿಗಳ ಸ್ವಾಗತದ ಜವಾಬ್ದಾರಿಗಳನ್ನು ಸಭೆಯಲ್ಲಿ ಹಂಚಿಕೆ ಮಾಡಲಾಯಿತು. ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತ್‌ಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮಾಹಿತಿ ನೀಡಿದರು. ಇದೇ ವೇಳೆ ಭರತ್ ಮುಂಡೋಡಿ ಮೇಳದ ಕರಪತ್ರವನ್ನು ಅನಾವರಣಗೊಳಿಸಿದರು.

ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸುಳ್ಯ ತಾಲೂಕು ಪಂಚಾಯತ್ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಆಶ್ರಯದಲ್ಲಿ ಮೇಳ ನಡೆಯಲಿದೆ.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರಾದ ಸುರೇಶ್ ಎಂ.ಹೆಚ್. ಅಮೈ, ಪ್ರಶಾಂತ್ ಮರುವಂಜ, ಮುಸ್ತಫಾ ಬೆಳ್ಳಾರೆ, ಕುಸುಮಾಧರ ಕೆರೆಯಡ್ಕ, ಸನತ್ ಮುಳುಗಾಡು, ಶಶಿಕಲಾ ದೇರಪ್ಪಜ್ಜನಮನೆ, ಸಂಧ್ಯಾ ದೋಳ, ತಿರುಮಲೇಶ್ವರಿ ಅರ್ಭಡ್ಕ, ಪ್ರಮೋದ್ ಬೊಳ್ಳಾಜೆ, ಗಣೇಶ್ ನಾಗಪಟ್ಟಣ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts