Featured, ಇತರೆ, ಸ್ಥಳೀಯ

ಅ.27ರಂದು ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾವಳಿ

14 ದೇಶಗಳ ಕ್ರೀಡಾಪಟುಗಳು ಭಾಗಿ — ಮುಖ್ಯಮಂತ್ರಿ ಸಿದ್ದರಾಮಯ್ಯ ರಿಂದ ಚಾಲನೆ

ಮಂಗಳೂರು : ಮಂಗಳೂರಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಇಂಟರಾಷನಲ್ ಚಾಲೆಂಜ್ 2025″ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 27 ರಂದು ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ

ಯಾವುದೇ ಲೋಪವಾಗದಂತೆ ಸಿದ್ಧತೆಗೈಯುವಂತೆ ಜಿಲ್ಲಾಧಿಕಾರಿಗಳ ಸೂಚನೆ

ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟದ ಪೂರ್ವ ಸಿದ್ಧತಾ ಸಭೆ ನಡೆಯಿತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. “ಈ ಕ್ರೀಡಾಕೂಟ ಜಿಲ್ಲೆಯ ಗೌರವದ ವಿಷಯವಾಗಿದೆ. ಯಾವುದೇ ಲೋಪವಾಗದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಬೇಕು,” ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಮುಂದುವರೆದು, “ಜಿಲ್ಲೆಯ ಕ್ರೀಡಾ ಮೂಲಸೌಕರ್ಯಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಕ್ರೀಡಾಪಟುಗಳಿಗೆ ಅಗತ್ಯವಾದ ಕ್ರೀಡಾ ಸೌಲಭ್ಯಗಳು, ವಸತಿ ವ್ಯವಸ್ಥೆ ಹಾಗೂ ಭದ್ರತೆಯನ್ನು ಉನ್ನತ ಮಟ್ಟದಲ್ಲಿ ಒದಗಿಸಬೇಕು,” ಎಂದು ನಿರ್ದೇಶಿಸಿದರು.ಕ್ರೀಡಾಕೂಟದಲ್ಲಿ 14 ದೇಶಗಳಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಒಳಗಿನ ಎಲ್ಲಾ ತಾಂತ್ರಿಕ ಅಂಶಗಳನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಬೇಕೆಂದು ಹಾಗೂ ಕ್ರೀಡಾಪಟುಗಳು ಮತ್ತು ತೀರ್ಪುಗಾರರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕ್ರೀಡಾಕೂಟದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಬಿಂಬಿಸುವ ಪ್ರದರ್ಶನ ಹಾಗೂ ಮಾಹಿತಿ ಕೇಂದ್ರ ಸಿದ್ಧಗೊಳಿಸಬೇಕು. ಕ್ರೀಡಾಪಟುಗಳು ಪ್ರವಾಸಿ ತಾಣಗಳಿಗೆ ಹೋಗಲಿಚ್ಛಿಸಿದ್ದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದರು. ಕ್ರೀಡಾಪಟುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆರೋಗ್ಯ ಕೇಂದ್ರವನ್ನು ಕ್ರೀಡಾಂಗಣದಲ್ಲಿ ಸಜ್ಜುಗೊಳಿಸಬೇಕು. ಕ್ರೀಡಾ ವೈದ್ಯಕೀಯ ತಜ್ಞರನ್ನು ನಿಯೋಜಿಸುವಂತೆ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಹಾಗೂ ಅಸೋಸಿಯೇಷನ್ ಸಮನ್ವಯದಿಂದ ನಿರ್ವಹಿಸುವಂತೆ ಅವರು ತಿಳಿಸಿದರು ಸಭೆಯಲ್ಲಿ ಉಪ ಪೋಲಿಸ್ ಆಯುಕ್ತ ಮಿಥುನ್ ಹೆಚ್.ಎನ್, ಸ್ಮಾರ್ಟ್ ಸಿಟಿ ಎಂ.ಡಿ ಸಂತೋಷ್ ಕುಮಾ‌ರ್, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್‌ ಕುಮಾ‌ರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Related Posts