Featured, ಇತರೆ, ಸ್ಥಳೀಯ

ಗೃಹ ಇಲಾಖೆ ವೈಫಲ್ಯ: ಗೃಹ ಸಚಿವರನ್ನು ವಜಾಗೊಳಿಸಲು ಆಪ್ ಆಗ್ರಹ

ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನಿಯಂತ್ರಣ ತಪ್ಪಿರುವ ಅಪರಾಧ ಚಟುವಟಿಕೆಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ವೈಫಲ್ಯವೇ ಕಾರಣ ಎಂದು ಆರೋಪಿಸಿದರು. ಮಹಿಳಾ–ಮಕ್ಕಳ ಮೇಲಿನ ದೌರ್ಜನ್ಯ, ಕೋಟ್ಯಾಂತರ ರೂಪಾಯಿ ಲೂಟಿ, ಸೈಬರ್ ಅಪರಾಧ ಸೇರಿದಂತೆ ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಹೇಳಿದರು. ಗೃಹ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದಿದ್ದರೆ ಮುಖ್ಯಮಂತ್ರಿಗಳ ಮನೆ ಎದುರು ಆಮ್ ಆದ್ಮಿ ಪಕ್ಷವು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಬೆಂಗಳೂರು

ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್ ಅವರು, “ರಾಜ್ಯದಲ್ಲಿ ಎಲ್ಲೆಡೆ ಅಪರಾಧ ಚಟುವಟಿಕೆಗಳು ಅವ್ಯಾಹತವಾಗಿ ನಡೆದಿದೆ. ಸಾಮಾನ್ಯ ಜನತೆ ಶಾಂತಿಯುತವಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡಹಗಲೇ ಸಿನಿಮಿಯ ರೀತಿಯಲ್ಲಿ ಕೋಟ್ಯಂತರ ಹಣ ದೋಚುವ ಘಟನೆಗಳು ನಡೆಯುತ್ತಿವೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕೋಟ್ಯಾಂತರ ರೂಪಾಯಿಗಳ ಸೈಬರ್ ಅಪರಾಧಗಳು, ಕೊಲೆ–ಕಳ್ಳತನ–ದೊಂಬಿ ಪ್ರಕರಣಗಳು, ಕೋಮು ದಳ್ಳೂರಿಗಳು ಹೆಚ್ಚಾಗುತ್ತಿದ್ದರೂ ಗೃಹ ಸಚಿವರು ಕೇವಲ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

ಆರೋಪಗಳನ್ನು ಮುಂದುವರಿಸಿದ ಅವರು, “ಪೊಲೀಸ್ ಇಲಾಖೆಯ ಮೇಲೆ ಗೃಹ ಸಚಿವರಿಗೆ ಯಾವುದೇ ಹತೋಟಿ ಉಳಿದಿಲ್ಲ. ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇಂತಹ ವೈಫಲ್ಯಗೊಳಗಾದ ಮಂತ್ರಿಗಳನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

ಗೃಹ ಸಚಿವರ ರಾಜೀನಾಮೆಗಾಗಿ ನಡೆಸಲು ಯೋಜಿಸಿದ್ದ ಪ್ರತಿಭಟನೆಯನ್ನು ಪೊಲೀಸರು ಅನುಮತಿಸುತ್ತಿಲ್ಲ. ಈ ದಮನಕಾರಿ ವರ್ತನೆ ಮುಂದುವರೆದರೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿಗಳ ಮನೆ ಮುಂದೆ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ” ಎಂದು ಲಕ್ಷ್ಮಿಕಾಂತ ರಾವ್ ಎಚ್ಚರಿಸಿದರು.

Related Posts