ಕಡಬ ಪ.ಪಂ. ನಾಮನಿರ್ದೇಶಿತ ಸದಸ್ಯರ ನೇಮಕಾತಿ ರದ್ದು – ರಾಜಕೀಯ ಶಾರ್ಟ್ಕಟ್ಗೆ ಬ್ರೇಕ್!
ಕಡಬ
“ಹೈಕಮಾಂಡ್ ಹೇಳಿದರೆ ಎಲ್ಲವೂ ಸರಿ” ಎನ್ನುವ ಕಾಲವೀಗ ಹಳೆಯದಾಯಿತೇನೋ! ಕಡಬ ಪಟ್ಟಣ ಪಂಚಾಯತ್ಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದ ಮೂವರು ಮುಖಂಡರ ನೇಮಕಾತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದ್ದು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕೊನೆಗೂ ಗೆಲುವು ದೊರೆತಂತಾಗಿದೆ.
ಕಾಂಗ್ರೆಸ್ ಜಯಭೇರಿ ಬಾರಿಸಿದ ಸಂಭ್ರಮ ಇನ್ನೂ ಮಗ್ಗು ಹಾಕುವ ಮೊದಲೇ, ಅಶ್ರಫ್ ಶೇಡಿಗುಂಡಿ, ಶಾಲಿನಿ ಸತೀಶ್ ಹಾಗೂ ಆಶಿಸ್ ಅರಸ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ತಿಳಿಯುವಷ್ಟರಲ್ಲಿ ಕಾರ್ಯಕರ್ತರ ರಕ್ತದೊತ್ತಡ ಗರಿಷ್ಠ ಮಟ್ಟ ತಲುಪಿತ್ತು
“ನಾವಿಲ್ಲದೆ ಪಟ್ಟಿ ಹೇಗೆ?”
ಪಂಚಾಯತ್ ವ್ಯಾಪ್ತಿಯಲ್ಲೇ ಕಾಣಿಸದ, ಕೆಲವೊಮ್ಮೆ ಚುನಾವಣೆಯಲ್ಲಿ ಸೋತು ‘ರಾಜಕೀಯ ವಿಶ್ರಾಂತಿಯಲ್ಲಿ’ ಇದ್ದವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂಬ ಆರೋಪ ಕೇಳಿದೆ, ಇತ್ತೀಚಿಗೆ ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಸಭೆ ರಾಜಕೀಯ ಸಭೆಯಾಗಿ ಆರಂಭವಾಗಿ, ಭಾವನಾತ್ಮಕ ಧರಣಿಯಂತೆ ಅಂತ್ಯಗೊಂಡಿತ್ತು. ಕೆಲವರು “ಪಕ್ಷಕ್ಕಿಂತ ಮೊದಲು ನಮಗೆ ಗೌರವ” ಎಂದು ಘೋಷಣೆ ಕೂಗಿದರೆ, ಇನ್ನೂ ಕೆಲವರು ಸಾಮೂಹಿಕ ರಾಜೀನಾಮೆಯ ಅಸ್ತ್ರವನ್ನೇ ಹೊರತೆಗೆದಿದ್ದರು.
ರಾಜಕೀಯ ಪ್ರಭಾವ ಬಳಸಿ ‘ವಾಮ ಮಾರ್ಗ’ದ ಮೂಲಕ ಸ್ಥಾನ ಗಿಟ್ಟಿಸಿಕೊಂಡೆವು ಎನ್ನುವವರ ಕನಸಿಗೆ ಸರ್ಕಾರ ಈಗ ಬ್ರೇಕ್ ಹಾಕಿದ್ದು, “ಮುಖಭಂಗ” ಎಂಬ ಪದಕ್ಕೂ ಹೊಸ ಅರ್ಥ ಸಿಕ್ಕಂತಾಗಿದೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದ ಹೈಕಮಾಂಡ್, ಕೊನೆಗೂ ಹಳೆಯ ಆದೇಶವನ್ನು ಹಿಂಪಡೆದು ರಾಜಕೀಯ ಯೂ-ಟರ್ನ್ ತೆಗೆದುಕೊಂಡಿದೆ.
ಹೊಸ ಪಟ್ಟಿ – ಹೊಸ ನಿರೀಕ್ಷೆ
ಈ ಕುರಿತು ಪ್ರತಿಕ್ರಿಯಿಸಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕಾರ್ಯಕರ್ತರ ಭಾವನೆಗಳಿಗೆ ಬೆಲೆ ನೀಡಿ ಹಳೆಯ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಹೊಸ ಪಟ್ಟಿಯನ್ನು ಹೈಕಮಾಂಡ್ಗೆ ರವಾನೆ ಮಾಡಲಾಗಿದೆ. ಈ ಬಾರಿ ‘ಪಂಚಾಯತ್ ಕುರಿತು ಅರಿವು ಹೊಂದಿರುವವರು ಹಾಗೂ ಪಕ್ಷಕ್ಕಾಗಿ ದುಡಿದವರು’ ಮಾತ್ರ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

