ಸುಳ್ಯ : ಕರ್ನಾಟಕ ಸರ್ಕಾರ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದು, ಅದರ ಭಾಗವಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕಟ್ಟಡಗಳು, ಅನುಮೋದನೆ ಪಡೆಯದೆ ನಿರ್ಮಾಣಗೊಂಡ ಬಡಾವಣೆಗಳು, ಅಪಾರ್ಟ್ಮೆಂಟ್ಗಳು, ಬಹುಮಹಡಿ ಕಟ್ಟಡಗಳಲ್ಲಿನ ವಾಸ್ತವ್ಯ ಹಾಗೂ ವಾಣಿಜ್ಯ ಉದ್ದೇಶದ ಕೊಠಡಿಗಳಿಗೆ ‘ಎ ಖಾತಾ’ ನೀಡಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ನಿರ್ಧಾರದಿಂದ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಬ್ಯಾಂಕ್ಗಳಿಂದ ಸಾಲ ಪಡೆಯಲು, ಖಾತಾ ಮಾಡಿಸಿಕೊಳ್ಳಲು, ಮಾಲೀಕತ್ವ ನೋಂದಣಿ, ಕಟ್ಟಡ ನವೀಕರಣ, ವಿಸ್ತರಣೆ ಹಾಗೂ ಮಹಡಿ ನಿರ್ಮಾಣಕ್ಕೆ ಅಗತ್ಯ ಪರವಾನಿಗೆ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ‘ಖಾತಾ ಭಾಗ್ಯ’ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆ.ಎಂ. ಮುಸ್ತಫ ಅವರು ಮನವಿ ಮಾಡಿದ್ದಾರೆ.

