ನೆಲ್ಲಿಹುದಿಕೇರಿ: ಐನ್ ಆಪ್ಟಿಕಲ್ಸ್ ಅಪ್ರೋಮೆಟ್ರಿ ಕ್ಲಿನಿಕ್ ಇವರ ಆಶ್ರಯದಲ್ಲಿ ಅಭ್ಯತ್ ಮಂಗಲ ಗ್ರಾಮೀಣ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರವನ್ನು ಕೊಡಗು ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರು ಹಾಗೂ ನೆಲ್ಲಿಹುದಿಕೇರಿ ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಶಿಯಾಬುದ್ದೀನ್ ವಿ.ಪಿ.ಎಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಸಂಸ್ಥೆಯು ನೀಡುತ್ತಿರುವ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಉಚಿತ ನೇತ್ರ ತಪಾಸಣೆಗೊಳಪಟ್ಟರು. ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಫಾಸಿಲ್ ರಹೀಮ್, ಅನ್ಸಾರ್, ಅನ್ಸಾರುದ್ದೀನ್, ಶಿಫಾನತ್, ಫಾತಿಮತ್ ಅಫೀಫ ಇಬ್ರಾಹಿಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಬಿರವು ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇಂತಹ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಆಯೋಜಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

